ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯನ್. ಕೊನೆಯ 'ಜೈಲರ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಮುಂದಿನ 'ವೆಟ್ಟೈಯನ್' ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವೆಟ್ಟೈಯನ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ತಲೈವರ್ ಇತ್ತೀಚೆಗಷ್ಟೇ ಚೆನ್ನೈನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಇದೀಗ ಸೆಟ್‌ನಲ್ಲಿರುವ ರಜನಿಕಾಂತ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೆಟ್ಟೈಯನ್ 2024ರ ಬಹುನಿರೀಕ್ಷಿತ ಚಿತ್ರ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾಗೆ ಟಿ.ಜೆ ಜ್ಞಾನವೆಲ್ ಅವರ ನಿರ್ದೇಶನವಿದೆ. ಅಮಿತಾಭ್ ಬಚ್ಚನ್, ಫಹಾದ್ ಪಾಸಿಲ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳು ತೆರೆ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಚುರುಕುಗೊಂಡಿದ್ದು, ಜನಪ್ರಿಯ ನಟ ರಜನಿಕಾಂತ್ ಅವರ ವಿಡಿಯೋ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ, ರಜನಿಕಾಂತ್ ಅವರು ತಮ್ಮ ವೆಟ್ಟೈಯನ್‌ನ ಸೆಟ್‌ಗೆ ಕಾರಿನಲ್ಲಿ ಆಗಮಿಸುತ್ತಿರುವುದನ್ನು ಕಾಣಬಹುದು. ತಮ್ಮ ಮೆಚ್ಚಿನ ತಲೈವರ್ ಅವರನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ತಲೈವರ್ ಎಂದು ಕಿರುಚಲು ಪ್ರಾರಂಭಿಸಿದ್ದಾರೆ. ರಜನಿಕಾಂತ್ ಪೊಲೀಸ್ ಸಮವಸ್ತ್ರವನ್ನು ಧರಿಸಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ನಂಬಲಾಗಿದೆ.
ಪೊಲೀಸ್ ಯೂನಿಫಾರ್ಮ್ನಲ್ಲಿದ್ದ ರಜನಿಕಾಂತ್ ಅಭಿಮಾನಿಗಳತ್ತ ಕೈಬೀಸಿದ್ದು, ಫ್ಯಾನ್ಸ್ ನಟನ ಬಳಿ ಮುಗಿಬಿದ್ದರು. ವೆಟ್ಟೈಯನ್ ನಿವೃತ್ತ ಪೊಲೀಸ್ ಅಧಿಕಾರಿಯ ಕಥೆಯನ್ನು ಒಳಗೊಂಡಿದೆ. ಹಾಗಾಗಿ ರಜನಿಕಾಂತ್ ನಿವೃತ್ತ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಈ ವಿಡಿಯೋ ಮೂಲಕ ಬಹುತೇಕ ಖಚಿತವಾಗಿದೆ. ವೆಟ್ಟೈಯನ್ ಸೆಟ್ನ ಹಲವು ಫೋಟೋ-ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.