ಕನ್ನಡದ 'ಬಿಗ್ ಬಾಸ್' ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಆಟದ ಮಜಲುಗಳು ಬದಲಾಗಿವೆ. ಗೆಲ್ಲಬೇಕೆಂಬ ಹಠ ಪ್ರತೀ ಸ್ಪರ್ಧಿಗಳಲ್ಲೂ ಕಾಣುತ್ತಿದೆ. ಸ್ನೇಹಿತರು ಅಪರಿಚಿತಾಗಿ ಬದಲಾಗಿದ್ದಾರೆ. ಒಳಗಿದ್ದ ಮನಸ್ತಾಪಗಳು ಬಹಿರಂಗಗೊಳ್ಳುತ್ತಿವೆ.
ಇದೀಗ 'ದಿನ ಕಳೆದಂತೆ ಚೈತ್ರಾ ಕುಂದಾಪುರ ಅವರ ಹುಚ್ಚು ಹೆಚ್ಚುತ್ತಿದೆ' ಎಂಬ ಹೇಳಿಕೆಯನ್ನು ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ನೀಡಿದ್ದಾರೆ. ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗುವ ಸುಳಿವನ್ನು ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ. ''ಭುಜಬಲಕ್ಕೂ ಬುದ್ಧಿಬಲಕ್ಕೂ ಜಿದ್ದಾಜಿದ್ದಿ!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ರಜತ್ ಕಿಶನ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
''ಬುಟ್ಟಿಯನ್ನು ಕೆಳಮುಖವಾಗಿ ಹಿಡಿದು ಚೆಂಡುಗಳನ್ನು ಶೇಖರಿಸಬೇಕು. ಪ್ರತೀ ಸುತ್ತನ್ನು ಗೆದ್ದ ಸದಸ್ಯರು ಓರ್ವ ಸ್ಪರ್ಧಿಯನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರಗಿಡಬೇಕು'' ಎಂದು ಸೂಚಿಸಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಅದರಂತೆ, ಹೆಚ್ಚು ಚೆಂಡುಗಳನ್ನು ಸ್ವೀಕರಿಸಿದ ರಜತ್ ಕಿಶನ್ ಅವರು ಕ್ಯಾಪ್ಟನ್ಸಿ ಟಾಸ್ಕ್ನಿಂದ ಚೈತ್ರಾ ಕುಂದಾಪುರ ಅವರನ್ನು ಹೊರಗಿಟ್ಟಿದ್ದಾರೆ. ರಜತ್ ನಿರ್ಧಾರದಿಂದ ಅಸಮಧಾನಗೊಂಡ ಚೈತ್ರಾ ಮಾತಿನ ಮಳೆ ಸುರಿಸಿದ್ದಾರೆ.
''ಇರ್ಲಿ ಬಿಡಿ ರಜತ್ ಅಣ್ಣ, ಇದು ನಿಮ್ಮ ನಿರ್ಧಾರ ಅಲ್ಲಾ ಅನ್ನೋದು ನನಗೂ ಗೊತ್ತು'' ಎಂದು ಚೈತ್ರಾ ತಿಳಿಸುತ್ತಿದ್ದಂತೆ 'ಯಾವಾಗ ನೋಡಿದ್ರೂ ಗೋಳು ಈ ಅಮ್ಮಂದು, ಏನ್ ಈ ಅಮ್ಮನ ಆಚೇನೆ ಹಾಕೋಂಗಿಲ್ವಾ?' ಎಂದು ತಿಳಿಸಿದ್ದಾರೆ. ಭುಜಬಲದ ಕುರಿತು ಚೈತ್ರಾ ಮಾತೆತ್ತಿದ್ದು, ಚೈತ್ರಾ ಸೂಪರ್ ಎಂದು ಕೂಗುತ್ತಾ ರಜತ್ ತಿರುಗಾಡಿದ್ದಾರೆ. ನಂತರ, ನನಗೆ ನಿಮ್ಮನ್ನು ನೋಡಿದ್ರೆ ನಗು ಬರುತ್ತೆ ಎಂದು ರಜತ್ ತಿಳಿಸಿದ್ದಾರೆ. ಭಯ ಯಾರಿಗೆ ಇದೆ ಅನ್ನೋದು ಗೊತ್ತಾಯ್ತೆಂದು ಚೈತ್ರಾ ತಿಳಿಸಿದ್ದು, 'ಅವರಿಗೆ ದಿನೇ ದಿನೇ ಹುಚ್ಚು ಜಾಸ್ತಿಯಾಗುತ್ತಿದೆ' ಎಂದು ರಜತ್ ಕಿಶನ್ ಟೀಸಿದ್ದಾರೆ. ಅದಕ್ಕೆ ಹೌದೌದು ಎಂದು ತ್ರಿವಿಕ್ರಮ್ ಸಾಥ್ ನೀಡಿದ್ದಾರೆ.