ಬೆಂಗಳೂರು: ತಮ್ಮ ವಿಶಿಷ್ಟ ಅಭಿನಯ ಮತ್ತು ಅದ್ಭುತ ನಿರ್ದೇಶನದ ಮೂಲಕ ಸದ್ದು ಮಾಡಿರುವ ನಟ ರಾಜ್ ಬಿ ಶೆಟ್ಟಿ. ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶದೆಲ್ಲೆಡೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಈ ಪ್ರತಿಭಾವಂತ ನಟ ಮಲಯಾಳಂನಲ್ಲಿ ನಟಿಸುತ್ತಿರುವ ಸುದ್ದಿ ಈ ಹಿಂದೆ ಸದ್ದು ಮಾಡಿತ್ತು. ಅಲ್ಲದೇ, ಮಲಯಾಳಂ ಚಿತ್ರತಂಡ ಕೂಡ ನಟನಿಗೆ ತಮ್ಮ ಚಿತ್ರತಂಡಕ್ಕೆ ಸ್ವಾಗತ ಕೋರಿತು. ಈ ಮೂಲಕ ರಾಜ್ ಮಲಯಾಳಂನಲ್ಲಿ ಮಿಂಚಲು ಸಜ್ಜಾಗಿರುವ ಸುದ್ದಿ, ಅನೇಕ ಕನ್ನಡಿಗರಲ್ಲೂ ಸಂತೋಷ ತಂದಿತು. ಇದೀಗ ಈ ಚಿತ್ರತಂಡದ ಟ್ರೈಲರ್ ಬಿಡುಗಡೆಯಾಗಿದೆ.
ಮಲಯಾಳಂನ ಖ್ಯಾತ ನಟ ಮುಮ್ಮುಟ್ಟಿ ಅವರೇ ಸ್ವತಃ ನಿರ್ಮಿಸಿ, ನಟಿಸುತ್ತಿರುವ 'ಟರ್ಬೋ' ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದನಲ್ಲಿ ನಟ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಯಾವ ಪಾತ್ರ, ಹೇಗಿರಲಿದೆ ಕಥೆ ಎಂಬ ಕುತೂಹಲ ಇದೀಗ ಎಲ್ಲ ಪ್ರೇಕ್ಷಕರಲ್ಲೂ ಮೂಡಿದೆ.
'ಟರ್ಬೋ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಮೇ 14ರಂದು ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ ಕೂಡ ಭಾಗಿಯಾಗಿ, ಗಮನ ಸೆಳೆದರು. ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ, ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಂಡು ಬಂದಿದ್ದಾರೆ.