ಕರ್ನಾಟಕ

karnataka

ETV Bharat / entertainment

6 ಪ್ಯಾನ್‌ ಇಂಡಿಯಾ ಸಿನಿಮಾ: ಇದು ಕನ್ನಡ ನಿರ್ದೇಶಕ ಚಂದ್ರು ಕನಸು - 6 Pan India Movies - 6 PAN INDIA MOVIES

ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಕನ್ನಡದ ಖ್ಯಾತ ನಿರ್ದೇಶಕ ಆರ್​ ಚಂದ್ರು ತಮ್ಮ ಆರ್‌.ಸಿ ಸ್ಟುಡಿಯೋಸ್‌ ಮೂಲಕ 6 ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ. ಏಪ್ರಿಲ್‌ 27ರಂದು 'ಫಾದರ್‌' ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ.

director R Chandru
ನಿರ್ದೇಶಕ ಆರ್​ ಚಂದ್ರು

By ETV Bharat Karnataka Team

Published : Apr 23, 2024, 6:34 PM IST

ಅದ್ಧೂರಿ ಮೇಕಿಂಗ್, ಕಂಟೆಂಟ್ ಆಧಾರಿತ ಚಿತ್ರಗಳನ್ನು ಮಾಡುತ್ತಾ ದಕ್ಷಿಣ ಚಿತ್ರರಂಗದಲ್ಲಿ ಗಮನ ಸೆಳೆದ ನಿರ್ದೇಶಕ ಆರ್.ಚಂದ್ರು. ಸಿನಿಮಾ ಪ್ರೀತಿ, ಶ್ರದ್ಧೆ ಮತ್ತು ಶ್ರಮ‌ ಚಂದ್ರು ಗೆಲುವಿನ ಮೂಲಮಂತ್ರ. ಸದ್ಯ ಸಂಪೂರ್ಣ ಭಾರತೀಯ ಚಿತ್ರರಂಗಕ್ಕೆ ಪರಿಚಿತ ನಿರ್ದೇಶಕ. ಅಷ್ಟು ಎತ್ತರಕ್ಕೆ ಬೆಳೆದು ನಿಂತಿರುವ ಅಪ್ಪಟ ಸಿನಿಮಾ ಪ್ರೇಮಿ.

ಹೌದು, ಸಾಮಾನ್ಯ ರೈತರೋರ್ವರ ಮಗ ಕಲರ್​ಫುಲ್‌ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು ನಿಜಕ್ಕೂ ಹೆಗ್ಗಳಿಕೆ. ಒಬ್ಬ ನಿರ್ದೇಶಕನಾಗಿ ಯಶಸ್ವಿಯಾಗೋದು ಈ ಕಾಲಘಟ್ಟದಲ್ಲಿ ನಿಜಕ್ಕೂ ಕಷ್ಟವೇ. ಸಿನಿ ಪ್ರೇಕ್ಷಕರಿಗೆ ರುಚಿಸುವ, ಕಾಡುವ, ಅಳಿಸುವ, ನಗಿಸುವ ಮತ್ತು ಟ್ರೆಂಡಿ ಸಿನಿಮಾಗಳನ್ನೇ ಕೊಡುವ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡವರು. ಇದಿಷ್ಟೇ ಆಗಿದ್ದರೆ ಹೆಗ್ಗಳಿಕೆ ಅನಿಸುತ್ತಿರಲಿಲ್ಲ. ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನಿರ್ಮಾಣಕ್ಕೂ ಇಳಿದು ಅಲ್ಲೂ ಗೆಲುವಿನ ನಗೆ ಬೀರಿದವರು. ಇದು ಹೆಮ್ಮೆ ಅಲ್ಲದೇ ಇನ್ನೇನು.

ಸಿದ್ದೇಶ್ವರ ಮೂವೀಸ್‌: ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್‌ ಮೂಲಕ ಐದು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಇದೇ ಚಂದ್ರು. ನಿರ್ದೇಶಕರ ಕನಸು ದೊಡ್ಡದು. ಕಂಡ ಕನಸಿಗೆ ಅವರೇ ಬಣ್ಣ ಹಚ್ಚಿದರು. ಅದನ್ನು ಪ್ರೇಕ್ಷಕರು ತಮ್ಮ ಕಲರ್‌ ಫುಲ್‌ ಕಣ್ಣಿನಿಂದ ಮೆಚ್ಚಿಕೊಂಡು ಇನ್ನಷ್ಟು ರಂಗಾಗಿಸಿದರು. ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್‌ ಹುಟ್ಟುಹಾಕಿ ಕನಸು ಸಾಕಾರಗೊಳಿಸುವ ಕಾರ್ಯಕ್ಕೆ ಮುಂದಾದರು. ಅವರ ಕನಸು ಎಂದಿಗೂ ಮರೆಯದಷ್ಟು ನನಸಾಯಿತು. ಕೆಲಸ ಹೆಸರಾಯಿತು. ಸಿನಿಮಾ ಉಸಿರಾಯಿತು. ಕಾಯಕ ನಿರಂತರವಾಯಿತು. ದೊಡ್ಡ ಯಶಸ್ಸು ಕಂಡರೂ ಸರಳ ವ್ಯಕ್ತಿತ್ವ ಅವರದ್ದು. ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಾಗಿದೆ.

ನಿರ್ದೇಶಕ ಆರ್​ ಚಂದ್ರು

ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್‌ ಹುಟ್ಟುಹಾಕಿ ಚಾರ್‌ಮಿನಾರ್‌, ಮಳೆ, ಐ ಲವ್ ಯು ಕನಕ ಮತ್ತು ಕಬ್ಜದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಸೂಪರ್ ಸ್ಟಾರ್‌ಗಳನ್ನೇ ಹಾಕಿಕೊಂಡು ಸಿನಿಮಾ ಮಾಡೋದು ಮತ್ತೊಂದು ಧೈರ್ಯದ ಕೆಲಸ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಅವರ ಎದೆಗಾರಿಕೆ, ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ ಮತ್ತು ಶ್ರಮವನ್ನು ಸಾಬೀತುಪಡಿಸಿದೆ.

ಆರ್‌.ಸಿ ಸ್ಟುಡಿಯೋಸ್‌: ರಿಯಲ್‌ ಸ್ಟಾರ್ ಉಪೇಂದ್ರ, ದುನಿಯಾ ವಿಜಯ್‌,‌ ಲವ್ಲಿ ಸ್ಟಾರ್‌ ಪ್ರೇಮ್‌ ಅವರಂತಹ ಸ್ಟಾರ್‌ಗಳು ಆರ್. ಚಂದ್ರು ಅವರ ಬ್ಯಾನರ್​ನಡಿ ಬಂದ ಸಿನಿಮಾಗಳಲ್ಲಿ ನಟಿಸಿ ಗೆಲುವು ಕಂಡವರು. ಚಂದ್ರು ಸದಾ ಸಕ್ಸಸ್‌ ಬೆನ್ನತ್ತಿದವರು. ಹಾಗಾಗಿ ದೊಡ್ಡದಾಗಿಯೇ ಯೋಚನೆ ಮಾಡುವ ಮೂಲಕ ಬಿಗ್ ಬಜೆಟ್‌ ಸಿನಿಮಾಗಳಿಗೆ ಕೈ ಹಾಕಿದ್ದಾರೆ. ಕನ್ನಡಕ್ಕಷ್ಟೇ ಸೀಮಿತವಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್ ಜೊತೆಗೆ ಈಗ ಆರ್‌.ಸಿ ಸ್ಟುಡಿಯೋಸ್‌ ಎಂಬ ದೊಡ್ಡ ನಿರ್ಮಾಣ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರ್‌.ಸಿ ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿ, ಶುಭ ಕೋರಿದ್ದು ವಿಶೇಷ.

ಆರ್‌.ಸಿ ಸ್ಟುಡಿಯೋಸ್‌ ಪ್ಯಾನ್‌ ಇಂಡಿಯಾ ಬ್ಯಾನರ್: ಇದೊಂದು ಪ್ಯಾನ್‌ ಇಂಡಿಯಾ ಬ್ಯಾನರ್.‌ ಕನ್ನಡಕ್ಕೆ ಸೀಮಿತವಾಗಿದ್ದ ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್‌ ಅನ್ನು ಸೇರಿಸಿಕೊಂಡೇ ಆರ್.ಸಿ ಸ್ಟುಡಿಯೋಸ್‌ ಆರಂಭವಾಗಿದೆ. ಈವರೆಗೆ ಸ್ಟಾರ್‌ ನಟರ ಐದು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ಆರ್.ಚಂದ್ರು ಅವರೀಗ ಆರ್.ಸಿ ಸ್ಟುಡಿಯೋಸ್‌ ಸಂಸ್ಥೆ ಮೂಲಕ ಒಟ್ಟಾರೆ ಆರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದಾರೆ. ಅವೆಲ್ಲವೂ ಬಿಗ್‌ ಬಜೆಟ್‌ ಸಿನಿಮಾಗಳು, ಬಿಗ್‌ ಸ್ಟಾರ್ಸ್‌ ಸಿನಿಮಾಗಳು ಅನ್ನೋದು ವಿಶೇಷ. ಈ ಸಾಲಿನಲ್ಲಿರುವ ಸಿನಿಮಾಗಳ ಪೈಕಿ 'ಫಾದರ್‌' ಚಿತ್ರದ ಮುಹೂರ್ತ ಕಾರ್ಯಕ್ರಮ ಇದೇ ಏಪ್ರಿಲ್‌ 27ರಂದು ಅದ್ಧೂರಿಯಾಗಿ ನಡೆಯಲಿದೆ. ಡಾರ್ಲಿಂಗ್‌ ಎನಿಸಿಕೊಂಡಿರುವ ಕೃಷ್ಣ ಮತ್ತು ಬಹುಭಾಷಾ ನಟ ಪ್ರಕಾಶ್​ ರೈ ಈ ಚಿತ್ರದ ಮುಖ್ಯ ಆಕರ್ಷಣೆ.

ಆರ್‌.ಸಿ ಸ್ಟುಡಿಯೋಸ್‌ ಲಾಂಚ್​ ಈವೆಂಟ್

ಹಳ್ಳಿಯಿಂದ ಮುಂಬೈವರೆಗೂ ಮಿಂಚಿದ ರೈತನ ಮಗ: ರೈತನ ಮಗ, ಸಿನಿಮಾ ಮೇಲಿನ ಪ್ರೀತಿಯಿಂದ ಹಳ್ಳಿಬಿಟ್ಟು ಗಾಂಧಿನಗರಕ್ಕೆ ಲಗ್ಗೆ ಇಟ್ಟವರು. ಯಶಸ್ವಿ 12 ಸಿನಿಮಾಗಳನ್ನು ನಿರ್ದೇಶಿಸಿ, 5 ಸಿನಿಮಾಗಳನ್ನು ನಿರ್ಮಿಸಿದವರು. ನೋಡ ನೋಡುತ್ತಲೇ ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗಿ ನೋಡುವಂತಹ 'ಕಬ್ಜ' ಎಂಬ ಸಿನಿಮಾ ಕಟ್ಟಿಕೊಟ್ಟವರು. ಬಹುಕೋಟಿ ರೂಪಾಯಿ ಬಂಡವಾಳ ಹೂಡಿದ ಕಬ್ಜದಲ್ಲಿ ಒನ್‌ ಮ್ಯಾನ್‌ ಆರ್ಮಿಯಂತೆ ಕೆಲಸ ಮಾಡಿ ಗೆದ್ದು ತೋರಿಸಿದರು. ಕಬ್ಜ ವೀಕ್ಷಿಸಿದ ಭಾರತದ ಬಹುತೇಕ ಮಂದಿ ಹುಬ್ಬೇರಿಸಿದಂತೂ ನಿಜ. ಮೇಕಿಂಗ್‌ ಕುರಿತು ಕೊಂಡಾಡಿದರು. ಆದರೆ, ಇಂಡಸ್ಟ್ರಿಯಲ್ಲೇ ಇರುವ ಬೆರಳೆಣಿಕೆಯಷ್ಟು ಮಂದಿ ಚಂದ್ರು ಕೆಲಸಗಳನ್ನು ಟೀಕಿಸಿದರೆಂಬ ಆರೋಪಗಳಿವೆ. ಆದ್ರೆ ಇಂದಿಗೂ ಅಮೆಜಾನ್‌ ಪ್ರೈಮ್‌ನಲ್ಲಿ 'ಕಬ್ಜ' ಐದು ಭಾಷೆಯಲ್ಲೂ ಲಭ್ಯವಿದೆ.

ಕಬ್ಜ ಸಿನಿಮಾ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟಿಗಟ್ಟಲೆ ಟ್ಯಾಕ್ಸ್‌ ಕಟ್ಟಿದ್ದನ್ನು ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು. ಯಾವ ನಿರ್ಮಾಪಕನೂ ಟ್ಯಾಕ್ಸ್‌ ಕಟ್ಟಿದ ಬಗ್ಗೆ ಗಟ್ಟಿದ್ವನಿಯಲ್ಲಿ ಹೇಳಿದ ಉದಾಹರಣೆ ಇಲ್ಲ. ಚಂದ್ರು ಮಾತ್ರ ತೆರಿಗೆಯನ್ನು ಉಲ್ಲೇಖಿಸಿದ್ದರು. ಸಿನಿಮಾದ ವಹಿವಾಟು ಚೆನ್ನಾಗಿಯೇ ಆಗಿರುವುದಾಗಿ ಹೇಳಿಕೊಂಡಿದ್ದರು. ಕನ್ನಡ ಮಾರುಕಟ್ಟೆಯ ಮಟ್ಟಿಗೆ ಹೇಳುವುದಾದರೆ ಇದು ಬಿಗ್‌ ಹಿಟ್‌ ಚಿತ್ರ. ಮುಂಬೈ ಮಾರುಕಟ್ಟೆಯಲ್ಲಿಯೂ ಕನ್ನಡ ಸಿನಿಮಾಗಳ ಬಗ್ಗೆ ಮಾತಾಡುವಾಗ ಕೆಜಿಎಫ್‌ ಮತ್ತು ಕಬ್ಜ ಹೆಸರುಗಳು ಕೇಳಿ ಬರುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ.

ಅನುಭವವೇ ಇದಕ್ಕೆಲ್ಲ ಕಾರಣ:ಆನಂದ್‌ ಪಂಡಿತ್‌, ಸಿಂಗಾಪುರ್‌ ಕಂಪೆನಿಯ ಅಲಂಕಾರ್‌ ಪಾಂಡಿಯನ್‌, ಇವರೊಂದಿಗೆ ಮಂಜುನಾಥ್‌ ಹೆಗ್ಗಡೆ ಎಂಬ ಉದ್ಯಮಿಯನ್ನು ಒಟ್ಟುಗೂಡಿಸಿಕೊಂಡು ಆರ್.ಸಿ. ಸ್ಟುಡಿಯೋಸ್‌ ಸಂಸ್ಥೆಯನ್ನು ಕನ್ನಡದಲ್ಲಿ ಕಟ್ಟಿದ್ದಾರೆ. ಸಿನಿರಂಗದ ಬೆಳವಣಿಗೆ ಒಬ್ಬ ನಿರ್ದೇಶಕ, ನಿರ್ಮಾಪಕನಿಂದ ಸಾಧ್ಯವಿಲ್ಲ. ಬಾಲಿವುಡ್‌ ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ ಅಲ್ಲಿ ಸ್ಟುಡಿಯೋಗಳು ತಲೆ ಎತ್ತಿವೆ. ಹಲವು ಬಿಗ್ ಬಜೆಟ್‌ ‌ ಚಿತ್ರಗಳು ನಿರ್ಮಾಣಗೊಂಡಿವೆ. ಸೌತ್‌ ಇಂಡಿಯಾದಲ್ಲಿ ರಾಮಾನಾಯ್ಡು ಸ್ಟುಡಿಯೋಸ್‌, ಅನ್ನಪೂರ್ಣ ಸ್ಟುಡಿಯೋಸ್‌, ಲೈಕಾ ಪ್ರೊಡಕ್ಷನ್ಸ್‌, ಪೀಪಲ್ಸ್‌ ಮೀಡಿಯಾ ಎಂಬ ದೊಡ್ಡ ನಿರ್ಮಾಣ ಸಂಸ್ಥೆಗಳು ಹುಟ್ಟಿದವು. ಕನ್ನಡದಲ್ಲಿ ಈ ಹಿಂದೆ ದೊಡ್ಡ ಮಟ್ಟದ ನಿರ್ಮಾಣ ಸಂಸ್ಥೆಗಳಿರಲಿಲ್ಲ. ಆ ಹೊತ್ತಲ್ಲಿ ಬಂದಿದ್ದೇ ಹೊಂಬಾಳೆ ಫಿಲ್ಮ್ಸ್.‌

ಅದೊಂದು ದೊಡ್ಡ ಸಂಸ್ಥೆಯಾಗಿ ತಲೆ ಎತ್ತಿತು. ಅದೇ ರೀತಿ ಚಲನಚಿತ್ರ ನಿರ್ಮಾಣ ಸಂಸ್ಥೆ ಕಟ್ಟಬೇಕೆಂಬ ಮಹದಾಸೆ ಹೊತ್ತು ಬಂದಿದ್ದೇ ಆರ್.ಚಂದ್ರು ಎಂಬ ಕನಸುಗಾರ. ಕನ್ನಡದ ಬಹುತೇಕ ಯುವ ನಿರ್ದೇಶಕರಿಗೆ, ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅನುಭವ ಇದ್ದರೆ, ನಷ್ಟದ ಮಾತು ಕಡಿಮೆ. ಹೊಂಬಾಳೆ ಫಿಲ್ಮ್ಸ್, ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಏಕೆ ನಷ್ಟ ಅನುಭವಿಸಲ್ಲ?. ಅವರೆಲ್ಲರೂ ಅನುಭವದಿಂದ ಸಂಸ್ಥೆ ಕಟ್ಟಿದವರು. ಚಂದ್ರು ಕೂಡ ನೂರಾರು ಕೋಟಿ ಹಣ ಹಾಕಿ ಕಬ್ಜ ಮಾಡಿ ಗೆದ್ದವರು. ಈಗ ಅದೇ ಅನುಭವದ ಮೇಲೆ ದೊಡ್ಡ ಸಂಸ್ಥೆ ಕಟ್ಟಿ ಅಲ್ಲೂ ಗೆಲುವಿನ ಬೆನ್ನತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಒಟ್ಟು 6 ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾಗಳು ಅನೌನ್ಸ್‌ ಆಗಿವೆ.

ಫಾದರ್‌ ನಿಮ್ಮನ್ನು ಬಿಗಿದಪ್ಪುವ ಚಿತ್ರ:ಈ ಫಾದರ್‌ ಸಿನಿಮಾ ಎದೆ ಭಾರವೆನಿಸುವ ಚಿತ್ರ. ಮನಸ್ಸಿಗೆ ಖುಷಿ ಕೊಡುವ, ಕಣ್ಣಲ್ಲಿ ಆನಂದಭಾಷ್ಪ ತರುವ, ಮತ್ತೆ ಮತ್ತೆ ಕಾಡುವ, ಏನೋ ಕಳೆದುಕೊಂಡ ಸಂಕಟ, ಇನ್ನೇನನ್ನೋ ಪಡೆಯಬೇಕೆಂಬ ಹಂಬಲ, ಮತ್ತೇನೋ ಉಳಿಸಿಕೊಳ್ಳಬೇಕೆಂಬ ಹಠ ಇವೆಲ್ಲದರ ಸಮ್ಮಿಶ್ರಣವೇ ಫಾದರ್.‌ ಇಲ್ಲಿ ನೋವಿದೆ, ನಲಿವಿದೆ. ಬಾಂಧವ್ಯದ ಹೂರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವದ ತಿರುಳಿದೆ. ಪ್ರತಿಯೊಬ್ಬರ ಮನಸ್ಸಿಗೂ ನಾಟುವ ಅಂಶವಿದೆ. ಕಣ್ಣಿಗೆ ಕಟ್ಟುವ ಚಿತ್ರಣವೂ ಇರಲಿದೆ. ಫಾದರ್‌ ಪ್ರತಿಯೊಬ್ಬರ ಮನಸ್ಸನ್ನು ಹಗುರಾಗಿಸೋ ಚಿತ್ರವಾದರೂ, ಏನೋ ಒಂದು ಮಿಸ್‌ ಆಯ್ತು ಅನ್ನೋ ಭಾವನೆಯ ಚಿತ್ರ ಇದಾಗಲಿದೆ. ಆರ್.ಸಿ. ಸ್ಟುಡಿಯೋದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಸ್ಟುಡಿಯೋ ಮುಖ್ಯಸ್ಥ ಆರ್.ಚಂದ್ರು ಒಂದೊಳ್ಳೆಯ ಕಂಟೆಂಟ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಶಾರುಖ್​ ಸಾಂಗ್​ಗೆ ಮೋಹನ್​​ಲಾಲ್ ಡ್ಯಾನ್ಸ್, ಮಮ್ಮುಟ್ಟಿ ಕೆನ್ನೆಗೆ ಮುತ್ತು - Mohanlal And SRK

ಹೌದು, ಜಗತ್ತಿನಲ್ಲಿ ಅಪ್ಪನ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪ ಅನ್ನೋದು ಆಕಾಶಕ್ಕಿಂತಲೂ ಮಿಗಿಲು. ಅಪ್ಪನ ಬಿಸಿಯುಸಿರು, ಅಪ್ಪನ ಅಪ್ಪುಗೆ, ಅಪ್ಪನ ನೋವು, ಅಪ್ಪನ ಬೆವರು, ಅಪ್ಪನ ಕಾತರ, ಆತುರ, ಚಡಪಡಿಕೆ, ಆಸೆ, ಜವಾಬ್ದಾರಿ ಇತ್ಯಾದಿಗಳ ರೂಪವೇ ಈ ಫಾದರ್‌ ಅಂತಂದುಕೊಂಡರೂ ಅದಕ್ಕಿಂತಲೂ ಮಿಗಿಲಾಗಿದ್ದು ಈ ಫಾದರ್‌ ಒಳಗಿದೆ. ಇದು ಎಲ್ಲರಿಗೂ ಇಷ್ಟವಾಗುವ ಚಿತ್ರವಾಗುತ್ತೆ ಎಂಬ ಭರವಸೆ ಆರ್ ಸಿ ಸ್ಟುಡಿಯೋದ್ದು. ಚಂದ್ರು ಕಂಟೆಂಟ್‌ಗೆ ಬೆಲೆ ಕೊಡ್ತಾರೆ. ಆ ಕಾರಣಕ್ಕೆ ನಿರ್ದೇಶಕ ರಾಜ ಮೋಹನ್‌ ಎಂಬುವವರನ್ನು ಕನ್ನಡಕ್ಕೆ ಕರೆದು ಅವಕಾಶ ಕೊಡುತ್ತಿದ್ದಾರೆ. ಈ ವಿಚಾರ ಕೂಡ ಪ್ರೇಕ್ಷಕರ ಮೆಚ್ಚುಗೆಗ ಪಾತ್ರವಾಗಿದೆ.

ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಸಾಲಿಗೆ ಆರ್‌ ಸಿ ಸ್ಟುಡಿಯೋ: ಈ ಸಂಸ್ಥೆ ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸುವ ಗುರಿ ಹೊಂದಿದೆ. ಆ ಪೈಕಿ, ಮೊದಲು 'ಫಾದರ್' ಕೈಗೆತ್ತಿಕೊಂಡಿದೆ. ಬಹುಭಾಷೆ ನಟ ಪ್ರಕಾಶ್‌ ರೈ, ಡಾರ್ಲಿಂಗ್‌ ಕೃಷ್ಣ, ತೆಲುಗಿನ ಸುನೀಲ್‌ ಸೇರಿದಂತೆ ಅನೇಕ ಬಹುಭಾಷಾ ನಟ, ನಟಿಯರ ದಂಡೇ ಈ ಚಿತ್ರದಲ್ಲಿರಲಿದೆ. ಪ್ರಸ್ತುತ ಆರು ಪ್ಯಾನ್‌ ಇಂಡಿಯಾ ಸಿನಿಮಾ ಅನೌನ್ಸ್‌ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಕೊಡುವ ಗುರಿ ಇದೆ. ಫಾದರ್ ಅಲ್ಲದೇ ಶ್ರೀರಾಮಬಾಣ, ಪೋಕ್ (Pok), ಡಾಗ್ ಹಾಗೂ ಕಬ್ಜ 2 ಸದ್ಯ ಪ್ರೀ ಪ್ರೊಡಕ್ಷನ್​ ಹಂತದಲ್ಲಿವೆ. ಈ ಮೂಲಕ ಕನ್ನಡದಲ್ಲಿರುವ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳ ಸಾಲಿಗೆ ಆರ್.ಸಿ. ಸ್ಟುಡಿಯೋ ಕೂಡ ಸೇರುವ ವಿಶ್ವಾಸವಿದೆ.

ABOUT THE AUTHOR

...view details