ಹೈದರಾಬಾದ್:ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ 'ಪುಷ್ಪ 2' ಚಿತ್ರ ಕಳೆದ ಹಲವು ದಿನಗಳಿಂದ ಬೇರೆ ಬೇರೆ ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗೆ ಬಿಡುಗಡೆಗೊಂಡ ಹಾಡು ಮತ್ತು ದುಬಾರಿ ಸೆಟ್ ವಿಚಾರ ಕುರಿತು ಚಿತ್ರವು ಸಿನಿ ರಸಿಕರ ಗಮನ ಸೆಳೆದಿತ್ತು.
ಇದಾದ ಬಳಿಕ ನಾಯಕ ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ನಡುವಿನ ಮನಸ್ತಾಪದ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಇದೆಲ್ಲವೂ ಸದ್ಯ ಶಮನೊಂಡಿದ್ದು 'ಪುಷ್ಪ 2' ಚಿತ್ರದ ಚಿತ್ರೀಕರಣ ಮತ್ತೇ ಭರದಿಂದ ನಡೆದಿದೆ. ಕೆಲವು ದಿನಗಳ ಮಟ್ಟಿಗೆ ಯುರೋಪ್ ಪ್ರವಾಸಕ್ಕೆ ತೆರಳಿದ್ದ ಅಲ್ಲು ಅರ್ಜುನ್, ಭಾರತಕ್ಕೆ ಮರಳಿದ್ದರಿಂದ ಶೀಘ್ರದಲ್ಲೇ ಶೂಟಿಂಗ್ ಶೆಟ್ಗೆ ಆಗಮಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಿರ್ದೇಶಕರ ಮತ್ತು ನಟರ ನಡುವೆ ಕೆಲವು ಕಾರಣಗಳಿಂದ ಇತ್ತೀಚೆಗೆ ಎಲ್ಲವೂ ಸರಿ ಇಲ್ಲ ಎಂಬ ವರದಿಗಳು ಹರಿದಾಡಿದ್ದವು. ಇದರ ನಡುವೆ ನಾಯಕ ನಟ ಅಲ್ಲು ಅರ್ಜುನ್ ಯುರೋಪ್ ಪ್ರವಾಸಕ್ಕೆ ತೆರಳಿದ್ದರು. ಅವರು ಅತ್ತ ಕಡೆ ಯುರೋಪ್ಗೆ ಪ್ರಯಾಣ ಬೆಳೆಸುತ್ತಿದ್ದಂತೆ ಇತ್ತ ಕಡೆ ಮನಸ್ತಾಪದ ವಿಚಾರಗಳು ಭಾರೀ ಸಂಚಲನ ಸೃಷ್ಟಿಸಿದ್ದವು. ವಿದೇಶಕ್ಕೆ ತೆರಳಿದ್ದ ಅಲ್ಲು ಅರ್ಜುನ್, ಸದ್ಯ ಸ್ವದೇಶಕ್ಕೆ ಮರಳಿದ್ದು, ಶೀಘ್ರದಲ್ಲೇ ಸೆಟ್‌ಗೆ ಮರಳಲಿದ್ದಾರೆ.
ಜುಲೈ 27 ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು, ಬಾಕಿ ಇರುವ ದೃಶ್ಯಗಳ ಶೂಟಿಂಗ್ ನಡೆದಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಅಲ್ಲು ಅರ್ಜುನ್ ಚಿತ್ರ ತಂಡ ಸೇರುವ ನಿರೀಕ್ಷೆಯಿದೆ. ಚಿತ್ರದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.