ಕರ್ನಾಟಕ

karnataka

ETV Bharat / entertainment

'ಪುರುಷೋತ್ತಮನ‌ ಪ್ರಸಂಗ'ದ​ ಅನುಭವ ತೆರೆದಿಟ್ಟ ಚಿತ್ರತಂಡ; ಶುಕ್ರವಾರ ಸಿನಿಮಾ ಬಿಡುಗಡೆ - ಅಜಯ್ ಪೃಥ್ವಿ

ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಸಿನಿಮಾ 'ಪುರುಷೋತ್ತಮನ‌ ಪ್ರಸಂಗ' ಸಿನಿಮಾ ಮಾರ್ಚ್ 1ಕ್ಕೆ ತೆರೆಕಾಣಲಿದೆ.

purushothamana prasanga
'ಪುರುಷೋತ್ತಮನ‌ ಪ್ರಸಂಗ'

By ETV Bharat Karnataka Team

Published : Feb 28, 2024, 3:57 PM IST

Updated : Feb 28, 2024, 4:22 PM IST

'ಪುರುಷೋತ್ತಮನ‌ ಪ್ರಸಂಗ' ಚಿತ್ರತಂಡ..

'ಪುರುಷೋತ್ತಮನ‌ ಪ್ರಸಂಗ'. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ತುಳು ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾದ ದೇವದಾಸ್ ಕಾಪಿಕಾಡ್ ಆ್ಯಕ್ಷನ್​ ಕಟ್​ ಹೇಳಿರುವ ಮೊದಲ ಕನ್ನಡ ಸಿನಿಮಾ. ಈ ಚಿತ್ರ ಚಂದನವನದಲ್ಲಿ ಒಂದಲ್ಲೊಂದು ವಿಚಾರಗಳಿಂದ ಗಮನ‌ ಸೆಳೆಯುತ್ತಿದೆ. ಟ್ರೇಲರ್​ನಲ್ಲಿ ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್ ಮೊದಲ ಬಾರಿ ಮಂಗಳೂರು ಭಾಷೆಯಲ್ಲಿ ಪಾತ್ರ ಪರಿಚಯಿಸುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ. ಇದೀಗ, ನಟ ಅಜಯ್ ಪೃಥ್ವಿ, ನಟಿ ರಿಷಿಕಾ ನಾಯ್ಕ್ ಹಾಗೂ ನಿರ್ಮಾಪಕ ರವಿಕುಮಾರ್ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮೊದಲು ಮಾತು ಆರಂಭಿಸಿದ ಯುವ ನಟ ಅಜಯ್ ಪೃಥ್ವಿ, "ಪುರುಷೋತ್ತಮನ ಪ್ರಸಂಗ ಔಟ್ ಆ್ಯಂಡ್ ಔಟ್ ಕಾಮಿಡಿ ಎಂಟರ್​ಟೈನ್​ಮೆಂಟ್ ಚಿತ್ರ. ನಾನು ಪುರುಷೋತ್ತಮನ ಪಾತ್ರ ನಿರ್ವಹಿಸಿದ್ದೇನೆ. ಸಿನಿಮಾದಲ್ಲಿ, ನನಗೆ ದುಬೈಗೆ ಹೋಗುವ ಆಸೆ. ಪುರುಷೋತ್ತಮ ದುಬೈಗೆ ಹೋಗುತ್ತಾನೋ ಇಲ್ಲವೋ? ಅನ್ನೋದೇ ಚಿತ್ರದ ಕಥೆ".

"ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ವಿ.ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡರು, ಜಯಂತ್ ಕಾಯ್ಕಿಣಿ ಹಾಗೂ ದೇವದಾಸ್​ ಕಾಪಿಕಾಡ್ ಅವರಂತಹ ದಿಗ್ಗಜ ಸಾಹಿತಿಗಳು ನಮ್ಮ ಸಿನಿಮಾಗೆ ಹಾಡುಗಳನ್ನು ಬರೆದಿದ್ದಾರೆ. ಒಂದೊಂದು ಹಾಡುಗಳು ಕೂಡ ಕೇಳುಗರನ್ನು ಇಂಪ್ರೆಸ್​ ಮಾಡುತ್ತಿವೆ. ನಾಯಕಿ ರಿಷಿಕಾ ನಾಯ್ಕ್ ಸಂಪ್ರದಾಯಸ್ತರಾಗಿ ಕಾಣಿಸುತ್ತಾರೆ. ನಮ್ಮಿಬ್ಬರ ಕೆಮಿಸ್ಟ್ರಿ ಬಹಳ ಚೆನ್ನಾಗಿ ಮೂಡಿಬಂದಿದೆ. ನಾನು ಸಿನಿಮಾಗೆ ಬರಲು ನಮ್ಮ ಕನ್ನಡದ ಎಲ್ಲಾ ತಾರೆಯರೇ ಸ್ಫೂರ್ತಿ. ಪುನೀತ್ ರಾಜ್​ಕುಮಾರ್ ಹಾಗೂ ಜಗ್ಗೇಶ್ ಸಿನಿಮಾಗಳು ಹೆಚ್ಚಾಗಿ ಇಷ್ಟ ಆಗುತ್ತವೆ" ಎಂದು ತಿಳಿಸಿದರು.

"ಸಿನಿಮಾ ಮಾರ್ಚ್ 1ಕ್ಕೆ ಬಿಡುಗಡೆಯಾಗುತ್ತಿದೆ. ಯಾವುದೇ ಅತಿರೇಖದ ಡೈಲಾಗ್​ಗಳು ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ನೋಡಬಹುದಾದ ಯೂತ್ ಸಬ್ಜೆಕ್ಟ್ ಒಳಗೊಂಡ ಸಿನಿಮಾ. ಚಿತ್ರದಲ್ಲಿ ಒಂದು ಸಂದೇಶವಿದೆ. ಅದನ್ನು ನೀವು ಚಿತ್ರಮಂದಿರಕ್ಕೆ ಬಂದು ನೋಡಬೇಕು" ಎಂದರು.

ನಟಿ ರಿಷಿಕಾ ನಾಯ್ಕ್ ಮಾತನಾಡಿ, "ಈ ವರ್ಷ ನನಗೆ ಬಹಳಾನೇ ಲಕ್ಕಿ ಎನ್ನಬಹುದು. ಯಾಕಂದ್ರೆ ಒಂದೇ ತಿಂಗಳಲ್ಲಿ ನನ್ನ ನಟನೆಯ ಜೂನಿ ಹಾಗೂ ಪುರುಷೋತ್ತಮನ ಪ್ರಸಂಗ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆದರೆ ಈ ಎರಡು ಚಿತ್ರಗಳಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿರುವ ಖುಷಿ ಇದೆ. ಸಂಬಂಧಗಳ ಬಗ್ಗೆ ಹೇಳುವ ಚಿತ್ರವಿದು. ನಾನು ಪಕ್ಕಾ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದೇನೆ. ಮಂಗಳೂರು ಭಾಷೆಯಲ್ಲಿ ನಡೆಯುವ ಕಥೆ. ನನಗೆ ತುಳು ಭಾಷೆ ಬರುವುದರಿಂದ ಶೂಟಿಂಗ್ ಸಮಯದಲ್ಲಿ ಸಹಾಯವಾಯಿತು. ನಾನು ಚಿಕ್ಕ ವಯಸ್ಸಿನಲ್ಲೇ ನಟಿ ಆಗಬೇಕೆಂದುಕೊಂಡಿದ್ದೆ. ಅದೇ ರೀತಿ ಕಾಲೇಜ್ ದಿನಗಳಲ್ಲಿ ಕೊಟ್ಟ ಸ್ಟೇಜ್ ಪರ್ಫಾಮೆನ್ಸ್​ ನನಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಿಸಿತ್ತು. ಆದರೆ ಮನೆಯಲ್ಲಿ ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲ. ನಾನು ಇಂಜಿನಿಯರಿಂಗ್ ಮಾಡುವ ಸಮಯಲ್ಲಿ, ಸಿನಿಮಾ ಇಂಡಸ್ಟ್ರಿಗೆ ಹೋಗುತ್ತೇನೆ ಅಂದಾಗ ಮನೆಯಲ್ಲಿ ಮೊದಲು ಇಂಜಿನಿಯರಿಂಗ್ ಮುಗಿಸು, ಆಮೇಲೆ ನೋಡೋಣವೆಂದ್ರು. ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿ, ಸೀದಾ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಾ ಅಭಿನಯದ ಬಗ್ಗೆ ಕಲಿತುಕೊಂಡು ನಾನು ಸಿನಿಮಾಗೆ ಬಂದೆ" ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ಮೆಕ್ಸಿಕೋ ಚಿತ್ರೋತ್ಸವದಲ್ಲಿ ಬಿಗ್​ ಬಾಸ್​ ವಿಜೇತ ಕಾರ್ತಿಕ್ ನಟನೆಯ 'ಡೊಳ್ಳು' ಪ್ರದರ್ಶನ

"ನಮ್ಮ ಸಿನಿಮಾದ ಡೈರೆಕ್ಟರ್ ದೇವದಾಸ್ ಕಾಪಿಕಾಡ್ ಅವರು ನಟನೆಗೆ ಸಂಬಂಧಿಸಿದಂತೆ ಸಾಕಷ್ಟು ಕಲಿಸಿಕೊಟ್ಟರು. ಒಂದು ವಾರ ಮಂಗಳೂರಿನಲ್ಲಿ ಟ್ರೈನಿಂಗ್ ತೆಗೆದುಕೊಂಡು ಅಭಿನಯಿಸಿದ್ದೇನೆ. ಇಡೀ ಚಿತ್ರೀಕರಣ ಮಂಗಳೂರಿನಲ್ಲೇ ನಡೆದಿದೆ. ಆಡಿಷನ್​​ಗೆ ಹೋದಾಗ ಸ್ವಲ್ಪ ಟೆನ್ಶನ್ ಆಗಿತ್ತು. ಅಜಯ್ ಅವರು ಮಾತನಾಡಿಸಿದ ಬಳಿಕ ಸ್ವಲ್ಪ ಕಾನ್ಫಿಡೆಂಟ್​ ಬಂತು. ಸಿನಿಮಾದ ಟ್ರೇಲರ್​​ ನೋಡಿದ ನನ್ನ ಸ್ನೇಹಿತರು ತುಂಬಾನೇ ಚೆನ್ನಾಗಿ ಕಾಣುತ್ತೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಬಗ್ಗೆ ನನಗೆ ತುಂಬಾನೇ ಆತ್ಮವಿಶ್ವಾಸವಿದೆ. ಈ ಸಿನಿಮಾವನ್ನು ನಿಜವಾಗಲೂ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತೆ ಅನ್ನೋ ವಿಶ್ವಾಸವಿದೆ" ಅಂತಾರೆ ರಿಷಿಕಾ ನಾಯ್ಕ್.

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿ ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದು, ಮಾರ್ಚ್ 1ಕ್ಕೆ ತೆರೆಕಾಣಲಿದೆ.

ಇದನ್ನೂ ಓದಿ:'ಕ್ಯಾಂಡಿ ಕ್ರಷ್' ಸೆಟ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವ

Last Updated : Feb 28, 2024, 4:22 PM IST

ABOUT THE AUTHOR

...view details