1960ರ 'ಮುಘಲ್-ಇ-ಅಝಂ' ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರು ಚಕ್ರವರ್ತಿ ಅಕ್ಬರ್ ಮತ್ತು ಸಲೀಮ್ ಪಾತ್ರಗಳನ್ನು ಚಿತ್ರಿಸಿದ್ದಾರೆ. ಸಿನಿಮಾದಲ್ಲಿ ತಂದೆ - ಮಗನ ಸಂಬಂಧದಲ್ಲಿನ ಬಿರುಕನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ನಂತರದ ದಿನಗಳಲ್ಲಿ ಆ ಚಿತ್ರವನ್ನು ಮರುಸೃಷ್ಟಿಸಲು ಹಲವು ಪ್ರಯತ್ನಗಳು ನಡೆದವು. ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ಈ ಚಿತ್ರವನ್ನು ರೀಮೇಕ್ ಮಾಡಲು ನಿರ್ಧರಿಸಿದಾಗ, ಅಂತಹ ಅದ್ಭುತ ಚಿತ್ರಕ್ಕೆ ಅಸಾಧಾರಣ ಪಾತ್ರವರ್ಗದ ಅಗತ್ಯವಿದೆ ಎಂಬುದನ್ನು ಅರಿತಿದ್ದರು. ಹಾಗಾಗಿ, ಪಾತ್ರಗಳಿಗೆ ಜೀವ ತುಂಬಲು ಇಡೀ ಬಚ್ಚನ್ ಕುಟುಂಬವನ್ನು ಒಪ್ಪಿಸಲು ಯೋಚಿಸಿದ್ದರು.
ಫಿಲ್ಮ್ಮೇಕರ್ ಮೆಹುಲ್ ಕುಮಾರ್ ಇತ್ತೀಚೆಗೆ ಈ ರೀಮೇಕ್ ಪ್ರಸ್ತಾಪದ ಬಗ್ಗೆ ದಕ್ಷಿಣ ಚಿತ್ರರಂಗದ ನಿರ್ಮಾಪಕರೊಂದಿಗೆ ನಡೆಸಿದ ಕುತೂಹಲಕಾರಿ ಮಾತುಕತೆಯನ್ನು ವಿವರಿಸಿದರು. ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ, ದಕ್ಷಿಣದ ಪ್ರಮುಖ ನಿರ್ಮಾಪಕರೊಬ್ಬರು ನನ್ನನ್ನು ಭೇಟಿಯಾಗಿ ಮುಘಲ್-ಇ-ಅಝಂ ಅನ್ನು ರೀಮೇಕ್ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದರು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಚಿತ್ರದ ಭಾಗವಾಗಿಸಲು ಬಯಸಿದ್ದರು ಎಂದು ಕುಮಾರ್ ತಿಳಿಸಿದರು.
ಕುಮಾರ್, ಆ ನಿರ್ಮಾಪಕರ ಹೆಸರನ್ನು ಉಲ್ಲೇಖಿಸದಿದ್ದರೂ, ಅಮಿತಾಭ್ ಬಚ್ಚನ್ ಅವರನ್ನು ಚಕ್ರವರ್ತಿ ಅಕ್ಬರ್ ಪಾತ್ರದಲ್ಲಿ, ಜಯಾ ಬಚ್ಚನ್ ಅವರನ್ನು ಜೋಧಾ ಬಾಯಿಯಾಗಿ, ಅಭಿಷೇಕ್ ಬಚ್ಚನ್ ಅವರನ್ನು ಸಲೀಮ್ ಆಗಿ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರನ್ನು ಅನಾರ್ಕಲಿ ಪಾತ್ರದಲ್ಲಿ ಅಭಿನಯ ಮಾಡಿಸಲು ಉದ್ದೇಶಿಸಿದ್ದಾರೆಂಬುದನ್ನು ಬಹಿರಂಗಪಡಿಸಿದರು.
"ಮುಘಲ್-ಇ-ಅಜಮ್ ಅನ್ನು ರೀಮೇಕ್ ಮಾಡಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ತಿಳಿಸಿದೆ. ನೀವು ಈ ಸಿನಿಮಾದ ಪ್ರಸ್ತಾಪ ಇಡುತ್ತಿದ್ದೀರಿ. ಆದ್ರೆ ಸಾಧ್ಯವಿಲ್ಲ. ಏಕೆಂದರೆ, ವೀಕ್ಷಕರು ಅದನ್ನು ಮೂಲ ಚಿತ್ರದೊಂದಿಗೆ ಹೋಲಿಸುತ್ತಾರೆ. ಏಕೆಂದರೆ, ಹಿಂದಿನದು ಅಂತಹ ಐತಿಹಾಸಿಕ ಚಿತ್ರವಾಗಿತ್ತು'' ಎಂದು ನಾನವರಲ್ಲಿ ಹೇಳಿದ್ದೆ ಎಂದು ತಿಳಿಸಿದರು. ನಂತರ, ನಿರ್ಮಾಪಕರು ಕುಮಾರ್ ಅವರ ಅಭಿಪ್ರಾಯಗಳನ್ನು ಅಮಿತಾಭ್ ಅವರಲ್ಲಿ ತಿಳಿಸಿದ್ದರು. ಅದಕ್ಕೆ ಅಮಿತಾಭ್ ಪ್ರತಿಕ್ರಿಯಿಸಿ, ಕುಮಾರ್ ಮಾತಲ್ಲಿ ಸರಿಯಾದ ಅಂಶವಿದೆ ಎಂದು ತಿಳಿಸಿದ್ದರು.