ಸ್ನೇಹದ ಮಹತ್ವ ಸಾರುವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರವನ್ನಿಟ್ಟುಕೊಂಡು ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ ನಿರ್ದೇಶಕ ಎಂ.ಡಿ.ಶ್ರೀಧರ್. 'ಜಂಬೂ ಸರ್ಕಸ್' ಚಿತ್ರದ ಶೀರ್ಷಿಕೆ. ಬಿಡುಗಡೆಗೆ ಸಜ್ಜಾಗಿರೋ ಕಾಮಿಡಿ ಡ್ರಾಮಾದ ಟೀಸರ್ ಅನಾವರಣಗೊಂಡಿದೆ. ಪ್ರೇಕ್ಷಕರು ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಬುಲ್ ಬುಲ್, ಕೃಷ್ಣ, ಚೆಲ್ಲಾಟ, ಪೊರ್ಕಿ, ಒಡೆಯ ಸೇರಿದಂತೆ ಸ್ಟಾರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿರುವ ಶ್ರೀಧರ್ ಅವರು 'ಒಡೆಯ' ಸಿನಿಮಾ ನಂತರ ಗ್ಯಾಪ್ ತೆಗೆದುಕೊಂಡು ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು. ಜಿಗರ್ ಖ್ಯಾತಿಯ ಪ್ರವೀಣ್ ತೇಜ್ ಹಾಗೂ ಯುವ ನಟಿ ಅಂಜಲಿ ಎಸ್.ಅನೀಶ್ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ.
ಟೀಸರ್ ಬಿಡುಗಡೆ ಬಳಿಕ ತಮ್ಮ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀಧರ್, ಒಡೆಯ ನಂತರ ಗ್ಯಾಪ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ಜಂಬೂ ಸರ್ಕಸ್ ಸಿನಿಮಾ ಆಗಲು ಕಾರಣ ನಿರ್ಮಾಪಕರು. ಮದುವೆ ಕಾರ್ಯಕ್ರಮವೊಂದರಲ್ಲಿ ಹೆಚ್.ಸಿ.ಸುರೇಶ್ ಅವರು ಸಿಕ್ಕಿದ್ದರು. ಆಗ ಒನ್ ಲೈನ್ ಹೇಳಿ ನಮಗೊಂದು ಸಿನಿಮಾ ಮಾಡಿಕೋಡಿ ಎಂದರು. ನಿರ್ಮಾಪಕರು ಕೆಲ ವರ್ಷಗಳ ಹಿಂದೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ಕೊಟ್ಟಿದ್ದರು. ಆ ಚಿತ್ರ ಆಗಿರಲಿಲ್ಲ. ಇದೀಗ ಈ ಸಿನಿಮಾ ಮಾಡಿದ್ದೇವೆ. ಪ್ರಾರಂಭದಲ್ಲಿ ನಿರ್ಮಾಪಕರಿಗೆ ಮತ್ತೋರ್ವರು ಸಾಥ್ ನೀಡಿದ್ದರು. ನಂತರ ಈ ಕಮಿಟ್ಮೆಂಟ್ ಮುಂದುವರಿಯಲಿಲ್ಲ. ಹಾಗಾಗಿ ಸುರೇಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಅವರು ಇನ್ನಷ್ಟು ಸಿನಿಮಾ ಮಾಡುತ್ತಾರೆ ಎಂದು ತಿಳಿಸಿದರು.
ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಪಡೆದು ನಂತರ ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ಒಂದೇ ಏರಿಯಾದಲ್ಲಿ ಎದುರು ಬದುರು ಮನೆ ಮಾಡಿಕೊಳ್ಳುತ್ತಾರೆ. ಕೊನೆಗೆ ಅವರಿಗೆ ಒಂದೇ ದಿನ ಮಕ್ಕಳೂ ಕೂಡ ಆಗುತ್ತವೆ. ಇವರ ಗೆಳೆತನ ಅವರ ಹೆಂಡತಿಯರಿಗೆ ಇಷ್ಟ ಇರುವುದಿಲ್ಲ. ಹಾಗಾಗಿ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಮುಂದೆ ಏನೆಲ್ಲಾ ನಡೆಯುತ್ತದೆ ಎಂಬುದೇ ಈ ಚಿತ್ರದ ಕಾನ್ಸೆಪ್ಟ್. ಇದರಲ್ಲಿ ಮೂರು ಫೈಟ್, ಸಾಂಗ್‌ಗಳು ಇವೆ. ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸಲಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಚಿತ್ರದ ನಾಯಕ ಪ್ರವೀಣ್ ತೇಜ್, ನನಗೆ ಇಂದು ಜಾಲಿಡೇಸ್ ಸಿನಿಮಾ ದಿನಗಳು ನೆನಪಿಗೆ ಬರುತ್ತಿದೆ. ನಾನು ಚಿತ್ರರಂಗಕ್ಕೆ ಬಂದು 15 ವರ್ಷಗಳಾಯ್ತು. ಆದ್ರೆ ಈಗಲೂ ಭಯ ಇದೆ. ನನ್ನ ಮೊದಲ ಸಿನಿಮಾ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಿದ್ದು ಸ್ಪೆಷಲ್ ಎನ್ನಬಹುದು. ನನಗಿದು ಒಳ್ಳೆಯ ಅವಕಾಶ. ಎರಡು ಫ್ಯಾಮಿಲಿ ನಡುವಿನ ಕಥೆ ಈ ಚಿತ್ರದಲ್ಲಿದೆ. ಕಿತ್ತಾಡಿಕೊಂಡಿದ್ದವರ ನಡುವೆ ಲವ್ ಆದ್ರೆ ಏನಾಗುತ್ತದೆ ಎನ್ನುವುದು ಕೂಡಾ ಈ ಚಿತ್ರದಲ್ಲಿದೆ ಎಂದರು.