ಸ್ಯಾಂಡಲ್ವುಡ್ನ ದೂದ್ ಪೇಡಾ ಖ್ಯಾತಿಯ ದಿಗಂತ್ ಮತ್ತು ಯಂಗ್ ಸ್ಟಾರ್ ನಟಿ ಧನ್ಯಾ ರಾಮ್ ಕುಮಾರ್ ತೆರೆ ಹಂಚಿಕೊಂಡಿರುವ ಕನ್ನಡದ ಬಹುನಿರೀಕ್ಷಿತ 'ಪೌಡರ್' ಚಿತ್ರ ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಟೈಟಲ್ ಮತ್ತು ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರಕ್ಕೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಮನರಂಜನೆಯ ರಸದೌತನ ಉಣಬಡಿಸುತ್ತಿರುವ ಕನ್ನಡ ಹಾಸ್ಯಪ್ರಧಾನ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಅಂಕಿ ಅಂಶಗಳೊಂದಿಗೆ ತನ್ನ ಪ್ರಯಾಣ ಪ್ರಾರಂಭಿಸಿದೆ.
ಕಂಪ್ಲೀಟ್ ಎಂಟರ್ಟೈನ್ಮೆಂಟ್ ಸಿನಿಮಾದ ಮೊದಲ ದಿನ ಕಲೆಕ್ಷನ್ ಮಾಹಿತಿಯನ್ನು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಒದಗಿಸಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಪೌಡರ್ ಸಿನಿಮಾ ತೆರೆಕಂಡ ದಿನ (ಶುಕ್ರವಾರ) 0.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ನಿರ್ಮಾಪಕರ ಆಪ್ತರ ಪ್ರಕಾರ, 10 ಲಕ್ಷ ರೂ ಕಮಾಯಿ ಮಾಡಿದೆ. ಅದಾಗ್ಯೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಶೀರ್ಷಿಕೆಯೇ ಹೇಳಿದಂತೆ ಇದೊಂದು 'ಪೌಡರ್' ಸುತ್ತ ಹೆಣೆದಿರುವ ಕಥೆ. ಪೌಡರ್ ಪ್ರಭಾವದಿಂದ ಸಿರಿವಂತರಾಗಲು ನಡೆಸುವ ಪ್ರಯತ್ನಗಳು, ಅವರಿಗೆ ಎದುರಾಗುವ ಪ್ರಯತ್ನಗಳು, ತಮ್ಮ ಗುರಿ ತಲುಪುತ್ತಾರಾ? ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ದಿಗಂತ್ ಸೂರ್ಯನ ಪಾತ್ರ ನಿರ್ವಹಿಸಿದ್ದು, ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುವ ಯುವಕನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ತಾನು ಪ್ರೀತಿಸೋ ಹುಡುಗಿಯನ್ನು ಇಂಪ್ರೆಸ್ ಮಾಡುತ್ತಲೇ ಇರುತ್ತಾನೆ. ಧನ್ಯಾ ರಾಮ್ಕುಮಾರ್ ಅವರು ನರ್ಸ್ ಪಾತ್ರ ನಿರ್ವಹಿಸಿದ್ದು. ದಿಗಂತ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಸ್ನೇಹಿತನ ಪಾತ್ರದಲ್ಲಿ ಅನಿರುದ್ಧ್ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಈ ಮೂವರೂ ಸೇರಿ ಪೌಡರ್ ಹೆಸರಿನ ಡ್ರಗ್ಸ್ ಮಾರಿ ಸಿರಿವಂತರಾಗುವ ಕನಸು ಕಾಣುತ್ತಾರೆ.
ಇನ್ನೂ ಡ್ರಗ್ಸ್ ಮಾರುವ ಅಣ್ಣಾಚಿ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಳಿಯಾಗಿ ಸುಲೇಮಾನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ನಟಿ ಶರ್ಮಿಳಾ ಮಾಂಡ್ರೆ ಅವರು ಮೇಕಪ್ ಮಲ್ಲಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರವಿಶಂಕರ್ ಹಾಗೂ ನಾಗಭೂಷಣ್ ಅವರ ಪಾತ್ರಗಳೂ ಕೂಡಾ ಗಮನ ಸೆಳೆದಿವೆ. ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮುಂದುವರಿಸಿದೆ.