ದೊಡ್ಮನೆ ಕುಟುಂಬದಿಂದ ಬಂದು ತಮ್ಮ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ಚೆಲುವೆ ಧನ್ಯಾ ರಾಮ್ ಕುಮಾರ್. ದೂದ್ಪೇಡಾ ಖ್ಯಾತಿಯ ದಿಂಗತ್ ಮಂಚಾಲೆ ಜೊತೆ ಜಡ್ಜ್ಮೆಂಟ್ ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತೊಂದು ಚಿತ್ರದಲ್ಲಿ ಕೈ ಜೋಡಿಸಿದ್ದಾರೆ. ಗುಲ್ಟು ನಿರ್ದೇಶಕ ಜನಾರ್ಧನ ಚಿಕ್ಕಣ್ಣ ನಿರ್ದೇಶಿಸಿರುವ 'ಪೌಡರ್' ಚಿತ್ರದಲ್ಲಿ ಧನ್ಯಾ ರಾಮ್ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೆಆರ್ಜಿ ಸ್ಟುಡಿಯೋಸ್ ಮತ್ತು ಟಿವಿಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಕನ್ನಡದ ಬಹುನಿರೀಕ್ಷಿತ ಚಿತ್ರವೇ 'ಪೌಡರ್'. ಈ ಸಿನಿಮಾದಲ್ಲಿ ಧನ್ಯಾ ರಾಮ್ಕುಮಾರ್ ಯಾವ ರೀತಿಯ ಪಾತ್ರ ನಿರ್ವಹಿಸಿದ್ದಾರೆ? ಧನ್ಯಾ ಸಿನಿಮಾಗಳ ಕಥೆಯನ್ನು ಮೊದಲು ಯಾರು ಕೇಳ್ತಾರೆ? ಹೀಗೆ ಸಾಕಷ್ಟು ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ.
ಪೌಡರ್ ಅಂದಾಕ್ಷಣ ಧನ್ಯಾರಿಗೆ ತಮ್ಮ ಸ್ಕೂಲ್ ಲೈಫ್ನ ಚಾಕೋ ಪೌಡರ್ ನೆನಪಾಗುತ್ತದೆ. ಹಾಗೇ ಜಾನ್ಸನ್ ಬೇಬಿ ಪೌಡರ್ ಕೂಡಾ ನೆನಪಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. "ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನಿತ್ಯಾ. ನರ್ಸ್ ಕ್ಯಾರೆಕ್ಟರ್ ನಿಭಾಯಿಸಿದ್ದೇನೆ. ಸಿನಿಮಾದಲ್ಲಿ ದಿಗಂತ್ ಹಾಗೂ ದುಡ್ಡಂದ್ರೆ ಇಷ್ಟ. ದುರಾಸೆ ಜೊತೆಗೆ ಕಾಮಿಡಿಯೂ ಇರುವ ಪಾತ್ರ ನನ್ನದು. ಮೊದಲು ಕಾಮಿಡಿ ಮಾಡಲು ನನ್ನಿಂದ ಆಗುತ್ತಾ ಅನ್ನೋ ಭಯವಿತ್ತು. ಆದ್ರೆ ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಅವರು ಉತ್ಸಾಹ ತುಂಬಿ ನನ್ನ ಕಡೆಯಿಂದ ಕಾಮಿಡಿ ಮಾಡಿಸಿದ್ದಾರೆ. ಸೀನ್ಗಳು ಸಖತ್ತಾಗಿ ಮೂಡಿ ಬಂದಿವೆ. ತುಂಬಾ ಇಷ್ಟಪಟ್ಟು ನನ್ನ ಪಾತ್ರ ನಿರ್ವಹಿಸಿದ್ದೇನೆ" ಎಂದು ತಿಳಿಸಿದರು.
"ಒಳ್ಳೆ ಚಿತ್ರತಂಡದೊಂದಿಗೆ ಕೆಲಸ ಮಾಡಬೇಕೆಂದು ಕಾಯುತ್ತಿದ್ದೆ. ಆಗ ಬಂದ ಅವಕಾಶವೇ 'ಪೌಡರ್'. ಚಿತ್ರದಲ್ಲಿ ಹಿರಿಯ ನಟ ರಂಗಾಯಣ ರಘು, ದಿಗಂತ್ ಮಂಚಾಲೆ, ಶರ್ಮಿಳಾ ಮಾಂಡ್ರೆ, ಗೋಪಾಲ ಕೃಷ್ಣ ದೇಶಪಾಂಡೆ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಕೆಆರ್ಜಿ ಸಂಸ್ಥೆ ಮೇಲೆ ನಂಬಿಕೆಯಿದೆ. ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ನಮ್ಮ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಹೆಮ್ಮೆ ಇದೆ. ಶರ್ಮಿಳಾ ಮಾಂಡ್ರೆ ಅವರ ಜೊತೆ ಕೆಲಸ ಮಾಡಿದ್ದು ಸಖತ್ ಖುಷಿ ಕೊಟ್ಟಿದೆ. ನಾವು ಆತ್ಮೀಯ ಸ್ನೇಹಿತೆಯರಾಗಿದ್ದೇವೆ. ಕಾಮಿಡಿ ಮಾಡುತ್ತಲೇ ನಾವು ಈ ಸಿನಿಮಾದ ಶೂಟಿಂಗ್ ಮುಗಿಸಿದೆವು" ಎಂದು ತಿಳಿಸಿದರು.
"ಇನ್ನೂ ನನ್ನ ಸಿನಿಮಾಗಳ ಕಥೆಯನ್ನು ಮೊದಲು ನನ್ನ ಅಮ್ಮ ಕೇಳ್ತಾರೆ. ಅವರಿಗೆ ಇಷ್ಟ ಆದ್ರೆ ನನ್ನ ಜೊತೆ ಚರ್ಚೆ ಮಾಡ್ತಾರೆ. ಆಮೇಲೆ ನಾನು ಕೂಡ ಕಥೆ ಕೇಳಿ ನಮ್ಮ ಅಪ್ಪ, ಅಣ್ಣ ಹಾಗೂ ನಮ್ಮ ಆಂಟಿಯವರ ಜೊತೆ ಚರ್ಚೆ ಮಾಡಿದ ಬಳಿಕ ಆ ಸಿನಿಮಾ ಒಪ್ಪಿಕೊಳ್ಳುತ್ತೇನೆ" ಎಂದು ಮಾಹಿತಿ ನೀಡಿದ್ರು.