'ಐಸಿ 814 - ದಿ ಕಂದಹಾರ್ ಹೈಜಾಕ್' ವೆಬ್ ಸರಣಿ ಒಟಿಟಿ ಪ್ಲ್ಯಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 29ರಂದು ಬಿಡುಡೆಗೊಂಡಿದ್ದು, ತೀವ್ರ ಟೀಕೆ ವ್ಯಕ್ತವಾಗಿತ್ತು. ಭಯೋತ್ಪಾದಕರ ಹೆಸರು ಬದಲಾವಣೆ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿತ್ತು. ವಿವಾದ ಉಲ್ಭಣಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಪಹರಣಕಾರರ ನಿಜ ಹೆಸರುಗಳನ್ನು ಬಳಸಲು ಸೂಚಿಸಿತ್ತು. ನಂತರ ಚಿತ್ರತಂಡ ಸೀರೀಸ್ನಲ್ಲಿ ಭಯೋತ್ಪಾದಕರ ನಿಜ ಹೆಸರನ್ನು ಬಳಸಿದೆ.
ಜನರ ಪ್ರಕಾರ, ವಿಮಾನವನ್ನು ಹೈಜಾಕ್ ಮಾಡಿದವರು ಭಯೋತ್ಪಾದಕರು. ಅವರೆಲ್ಲರೂ ಮುಸ್ಲಿಮರು. ಆದರೆ ನಿರ್ಮಾಪಕರು ಅವರ ಹೆಸರನ್ನು 'ಶಂಕರ್' ಮತ್ತು 'ಭೋಲಾ' ಎಂದು ಬದಲಾಯಿಸಿದ್ದರು. ಇದು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿತ್ತು. ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿ ಹೆಸರುಗಳನ್ನು ಸರಿಪಡಿಸಿತು.
ಇದೇ ವೇಳೆ, ಚಂಡೀಗಢದ ಪೂಜಾ ಕಟಾರಿಯಾ ಎಂಬುವವರು ಕಂದಹಾರ್ ಹೈಜಾಕ್ನ ಸಂಪೂರ್ಣ ಕಥೆ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ಹೈಚಾಕ್ ಆದಾಗ ಪೂಜಾ ವಿಮಾನದಲ್ಲಿದ್ದರು. ತಮ್ಮ ಅನುಭವದ ಜೊತೆಗೆ ನೆಟ್‌ಫ್ಲಿಕ್ಸ್ ಐಸಿ814 ಕಂದಹಾರ್ ಹೈಜಾಕ್ ವಿವಾದದ ಬಗ್ಗೆಯೂ ಪೂಜಾ ಪ್ರತಿಕ್ರಿಯಿಸಿದ್ದಾರೆ.
ಅಪಹರಣದ ವೇಳೆ ವಿಮಾನದಲ್ಲಿದ್ದ ಪೂಜಾ ಕಟಾರಿಯಾ ಮಾತನಾಡಿ, ''ವಿಮಾನದಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ತಿಳಿಸಿದರು. ತಲೆ ತಗ್ಗಿಸಿ ಸುಮ್ಮನೆ ಕೂರುವಂತೆ ತಿಳಿಸಿದರು. ನಾವು ಕಂದಹಾರ್ನಲ್ಲಿದ್ದೇವೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನಮಗೆ ಬಹಳ ಭಯವಾಗಿತ್ತು. 'ಬರ್ಗರ್' ಎಂಬ ಭಯೋತ್ಪಾದಕ ಕೊಂಚ ಫ್ರೆಂಡ್ಲಿಯಾಗಿದ್ದ. ಜನರಿಗೆ ಪ್ಯಾನಿಕ್ ಅಟ್ಯಾಕ್ ಆಗದಂತೆ ಆತ ನೋಡಿಕೊಂಡ''.