ಕರ್ನಾಟಕ ರತ್ನ, ನಗುಮೊಗದ ಒಡೆಯ ಖ್ಯಾತಿಯ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷ. ಆದ್ರೆ ಈ ರಾಜರತ್ನನ ನೆನಪುಗಳು ಒಂದಲ್ಲ ಒಂದು ರೀತಿಯಲ್ಲಿ ಮರುಕಳಿಸುತ್ತಲೇ ಇವೆ. ಈಗಾಗಲೇ ರಾಜ್ಯಾದ್ಯಂತ ಹಲವು ಪುತ್ಥಳಿ, ದೇಗುಲಗಳು ನಿರ್ಮಾಣಗೊಂಡಿವೆ. ಜಿಲ್ಲೆಗಳ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರನ್ನು ಇಡುವ ಮೂಲಕ, ಪುಣ್ಯ ಕಾರ್ಯಗಳ ಮೂಲಕ ಈ ದೊಡ್ಮನೆಯ ಕಿರಿ ಮಗನನ್ನು ಸ್ಮರಿಸಲಾಗುತ್ತಿದೆ.
2021ರ ಅಕ್ಟೋಬರ್ 29ರಂದು ಅಪಾರ ಸಂಖ್ಯೆಯ ಅಭಿಮಾನಿಗಳ ಅಪ್ಪು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ರಾಜ್ ಕುಟುಂಬ ಪೂಜೆ ಸಲ್ಲಿಸಿದೆ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಎರಡನೇ ಮಗಳು ವಂದಿತಾ, ಸಹೋದರ ರಾಘವೇಂದ್ರ ರಾಜ್ಕುಮಾರ್, ಅವರ ಪತ್ನಿ ಮಂಗಳ, ಮಕ್ಕಳಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಹಾಗೂ ಪುನೀತ್ ಅವರ ದೊಡ್ಡ ಅಕ್ಕ ಲಕ್ಷ್ಮೀ ಗೋವಿಂದರಾಜ್ ಕುಟುಂಬಸ್ಥರು ಸೇರಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಆರು ತಿಂಗಳು ಮಗುವಾಗಿದ್ದಾಗಲೇ ಮಾಸ್ಟರ್ ಲೋಹಿತ್ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು, ಬಾಲ್ಯದಲ್ಲೇ ಬೆಟ್ಟದ ಹೂವು ಸಿನಿಮಾಗಾಗಿ ಅತ್ಯುತ್ತಮ ಬಾಲ ನಟ ಎಂದು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಕ್ತ ಪ್ರಹ್ಲಾದ ಇವರು. ಬಾಲ ನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಅಪ್ಪು ಅವರು 'ಅಪ್ಪು' ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ವಿಜೃಂಭಿಸಿದ ಪುನೀತ್ ರಾಜ್‍ಕುಮಾರ್ ಕೇವಲ 46ನೇ ವಯಸ್ಸಿನೊಳಗೆ ಹಲವು ಸಾಧನೆಗೈದು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಸದ್ಯ ರಾಜರತ್ನನ ನೆನಪಿನಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದು, ಅವರ ಹೆಸರಿನಲ್ಲಿ ಪುಣ್ಯಕಾರ್ಯಗಳು ಮುಂದುವರಿದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಕಂಠೀರವ ಸ್ಟುಡಿಯೋಗೆ ಹರಿದು ಬರುವ ಜನಸಾಗರವೇ ಸಾಕ್ಷಿ. ಇಂದು ಕೂಡಾ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಆಗಮಿಸಿ, ಪರಮಾತ್ಮನಿಗೆ ನಮನ ಸಲ್ಲಿಸುತ್ತಿದ್ದಾರೆ.