ಕಳೆದ ತಿಂಗಳು ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಸಮೀಪ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರ್ಯಾಂಚ್ ಮತ್ತೋರ್ವ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣದ 6ನೇ ಆರೋಪಿಯನ್ನು ಹರಿಯಾಣದ ಫತೇಬಾದ್‌ನಲ್ಲಿ ಬಂಧಿಸಲಾಗಿದೆ.
ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಈ ಆರೋಪಿಯ ಹೆಸರು ಹರ್ಪಾಲ್ ಸಿಂಗ್ ಎಂದು ತಿಳಿದುಬಂದಿದೆ. ಹರ್ಪಾಲ್ ಫೈನಾನ್ಷಿಯರ್ ಆಗಿ ಪ್ರಕರಣದ ಭಾಗವಾಗಿದ್ದ ಎಂದು ಹೇಳಲಾಗುತ್ತಿದೆ. ಐದನೇ ಆರೋಪಿ ರಫೀಕ್ ಚೌಧರಿ ಎಂಬಾತನಿಗೆ ಹರ್ಪಾಲ್ ಹಣ ನೀಡಿದ್ದ. ಅಲ್ಲದೇ ಈ ಹಣವನ್ನು ಮರುಪಾವತಿ ಮಾಡಿಕೊಳ್ಳಲು ಕೂಡ ಯೋಜನೆ ರೂಪಿಸಿದ್ದ ಎಂಬ ಮಾಹಿತಿ ಇದೆ.
ಕಳೆದ ತಿಂಗಳು ಏಪ್ರಿಲ್ 14ರ ಮುಂಜಾನೆ 5 ಗಂಟೆಯ ಸುಮಾರಿಗೆ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಎಂಬಿಬ್ಬರು ಬೈಕ್‌ನಲ್ಲಿ ಬಂದು ಸಲ್ಮಾನ್ ಖಾನ್ ಅವರ ಮನೆಯ ಸಮೀಪ ಮನಬಂದಂತೆ ಕೆಲ ಸುತ್ತುಗಳ ಗುಂಡು ಹಾರಿಸಿದ್ದರು. ನಟನ ಅಪಾರ್ಟ್ಮೆಂಟ್ ಗೋಡೆಗೆ ಗುಂಡು ತಗುಲಿತ್ತು. ಗುಂಡು ಹಾರಿಸಿದ ನಂತರ ಇಬ್ಬರೂ ಮುಂಬೈನಿಂದ ನೇರವಾಗಿ ಗುಜರಾತ್‌ಗೆ ತೆರಳಿದ್ದರು. ಮುಂಬೈ ಪೊಲೀಸರು ಘಟನೆ ನಡೆದ ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಭುಜ್ ಪೊಲೀಸರು ಕಚ್‌ನಲ್ಲಿ ಇಬ್ಬರನ್ನೂ ಹಿಡಿದು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಆರೋಪಿಗಳು ಗುಜರಾತ್‌ಗೆ ಹೋಗುತ್ತಿದ್ದ ವೇಳೆ ಸೂರತ್‌ನ ತಾಪಿ ನದಿಯಲ್ಲಿ ಬಂದೂಕನ್ನು ಎಸೆದಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು ಆರು ಆರೋಪಿಗಳು ಅರೆಸ್ಟ್ ಆಗಿದ್ದು, ಓರ್ವ ಮೃತಪಟ್ಟಿದ್ದಾನೆ.