'ರಾಮಾಯಣ' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಸಿನಿಮಾ ಮೂಡಿಬರುವುದು ಬಹುತೇಕ ಖಚಿತವಾಗಿದೆ. ಶೀಘ್ರದಲ್ಲೇ ಸಿನಿಮಾ ಘೋಷಿಸುವ ತಯಾರಿಯಲ್ಲಿ ಚಿತ್ರತಂಡವಿದೆ ಎಂದು ಹೇಳಲಾಗಿದೆ. ಬಹುನಿರೀಕ್ಷೆಗಳನ್ನು ಹುಟ್ಟುಹಾಕಿರುವ ಹಿಂದೂ ಮಹಾಕಾವ್ಯ 'ರಾಮಾಯಣ' ಆಧಾರಿತ ಚಿತ್ರ ಅಂತಿಮವಾಗಿ ಸೆಟ್ಟೇರಿದೆ.
ಭಗವಾನ್ ಶ್ರೀರಾಮನಾಗಿ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್, ರಾವಣನಾಗಿ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಹಾಗೂ ಸೀತಾದೇವಿಯಾಗಿ ದಕ್ಷಿಣದ ಟಾಪ್ ಹೀರೋಯಿನ್ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರ ಬಿಗ್ ಪ್ರಾಜೆಕ್ಟ್ ಅಂತಿಮವಾಗಿ ಸೆಟ್ಟೇರಿದೆ.
ಬಹುತಾರಾಗಣದಲ್ಲಿ ನಿರ್ಮಾಣ ಆಗಲಿರುವ ಈ ಚಿತ್ರ ಸುದೀರ್ಘ ಚರ್ಚೆಗಳ ಬಳಿಕ ಮುಂಬೈನ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಿಸಿದೆ. ಕೆಲ ದಿನಗಳ ಕಾಲ ಗುಂಪೊಂದರ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಿನಿಮಾದ ಉದ್ಘಾಟನಾ ಸಮಾರಂಭಕ್ಕೆ ಯಾವೊಬ್ಬ ತಾರೆಯರೂ ಕೂಡ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.
ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ಈ ಬಹುನಿರೀಕ್ಷಿತ ಚಿತ್ರವನ್ನು ಶುರು ಮಾಡಬೇಕೆಂದುಕೊಂಡಿದ್ದರು. ಹಾಗಾಗಿ ನಿನ್ನೆ ಚಿತ್ರ ಸೆಟ್ಟೇರಿದೆ. ಕೆಲ ಜೂನಿಯರ್ ಕಲಾವಿದರ ಶೂಟಿಂಗ್ ನಡೆದಿದೆ. ಚಿಕ್ಕ ಚಿಕ್ಕ ದೃಶ್ಯಗಳನ್ನಷ್ಟೇ ಚಿತ್ರೀಕರಿಸಲಾಗಿದೆ. ಯಶ್ ವಿಚಾರ ಗಮನಿಸಿದ್ರೆ, ಹಲವು ತಿಂಗಳುಗಳ ಚರ್ಚೆಯ ಬಳಿಕ ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರಂತೆ. ಆದ್ರೆ ಈ ಬಗ್ಗೆ ಇನ್ನೂ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ. ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಗುಸುಗುಸು. ಆದರೆ ಮೊದಲ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎರಡನೇ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಯಶ್ ತಮ್ಮ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮುಗಿಸಿದ ನಂತರ ರಾಮಾಯಣ ತಂಡ ಸೇರಲಿದ್ದಾರೆ. ಈ ಚಿತ್ರವನ್ನು ಮೂರು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಚಿತ್ರಕ್ಕೆ ಸಂಬಂಧಿಸಿದವರು ತಿಳಿಸಿದ್ದಾರೆ.