ಹೈದರಾಬಾದ್:ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ಮಾಡೆಲ್ ನತಾಸಾ ಸ್ಟಾಂಕೋವಿಕ್ ದಾಂಪತ್ಯ ಬದುಕಿನಲ್ಲಿ ಇಬ್ಬರು ಬೇರೆ ಬೇರೆ ಹಾದಿ ತುಳಿದಿದ್ದಾರೆ. ಇದರ ಬೆನ್ನಲ್ಲೇ, ನಟಿ ಸರ್ಬಿಯಾಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಬಿಯಾದಲ್ಲಿನ ತಮ್ಮ ಮನೆಯ ಫೋಟೋ ಹಂಚಿಕೊಂಡಿದ್ದಾರೆ.
ಅವರ ಮನೆಯ ಬಾಲ್ಕನಿಯಿಂದ ಸುಂದರವಾದ ಸ್ನ್ಯಾಪ್‌ಶಾಟ್ ಅನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಮಾಡೆಲ್ ನತಾಸಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರದ ಸಮೇತ "ಹೋಮ್ ಸ್ವೀಟ್ ಹೋಮ್" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಗ ಅಗಸ್ತ್ಯನೊಂದಿಗೆ ನತಾಸಾ ಕಾಣಿಸಿಕೊಂಡಿದ್ದರು. ಈ ವೇಳೆ ಪಾಪರಾಜಿಗಳಿಗೆ ಪೋಸ್ ನೀಡದೇ ಗೌಪ್ಯವಾಗಿ ಹೋಗಿದ್ದರು. ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಯ ನಡುವೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೂಟ್‌ಕೇಸ್ ಇರುವ ಚಿತ್ರದ ಸಮೇತ ಮಾರ್ಮಿಕ ಸಂದೇಶವನ್ನು ಪೋಸ್ಟ್ ಮಾಡಿದ್ದರು. ವಿಮಾನ ಮತ್ತು ಮನೆಯ ಎಮೋಜಿಯೊಂದಿಗೆ "ಇದು ವರ್ಷದ ಸಮಯ" ಎಂದು ಶೀರ್ಷಿಕೆ ನೀಡಿದ್ದರು.
ವಿಚ್ಚೇದನ ಘೋಷಿಸಿದ ಹಾರ್ದಿಕ್:ಇದರ ಬೆನ್ನಲ್ಲೇ, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಸಾ ಸ್ಟಾಂಕೋವಿಕ್‌ರಿಂದ ಬೇರ್ಪಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. 4 ವರ್ಷಗಳ ಕಾಲ ಒಟ್ಟಿಗೆ ಇದ್ದ ನತಾಸಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಒಟ್ಟಿಗೆ ಇರಲು ಪ್ರಯತ್ನಿಸಿದ್ದೇವೆ. ಆದರೆ, ಅಂತಿಮವಾಗಿ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ಇದು ನಮ್ಮಿಬ್ಬರ ಒಮ್ಮತದ ಅಭಿಪ್ರಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.