ಸೌತ್ ಸೂಪರ್ ಸ್ಟಾರ್ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಪರಸ್ಪರರ ಕುಟುಂಬಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೇ ವರ್ಷ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ಜರುಗಿತ್ತು. ಇದೀಗ ಮದುವೆಗೆ ತಯಾರಿ ಭರದಿಂದ ಸಾಗಿದೆ.
ಸದ್ಯ ಪ್ರೇಮಪಕ್ಷಿಗಳ ಮದುವೆ ದಿನಾಂಕ ಬಹಿರಂಗಗೊಂಡಿದೆ. ಈ ಹಿಂದೆ ಜೋಡಿ ಕುರಿತು ಹಲವು ವದಂತಿಗಳು ಹರಡಿದ್ದವು. ಆದರೆ ಪ್ರೀತಿಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಡದ ಲವ್ಬರ್ಡ್ಸ್ ಇದೇ ಸಾಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿತು. ಇನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 2021ರಲ್ಲಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರಿಂದ ವಿಚ್ಛೇದನ ಪಡೆದ ನಾಗ ಚೈತನ್ಯ ಅವರೀಗ ಶೋಭಿತಾ ಧೂಳಿಪಾಳ ಅವರನ್ನು ಪತ್ನಿಯಾಗಿ ಸ್ವೀಕರಿಸಿ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದಾರೆ.
ಮದುವೆ ದಿನಾಂಕ ಲೀಕ್:2024ರ ಆಗಸ್ಟ್ 8ರಂದು ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಳ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂತಸದ ಅಲೆ ಎಬ್ಬಿಸಿತ್ತು. ಮದುವೆ ಯಾವಾಗ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ಇವರಿಬ್ಬರ ಮದುವೆ ದಿನಾಂಕ ಲೀಕ್ ಆಗಿದೆ.
ವರದಿಗಳನ್ನು ನಂಬುವುದಾದರೆ, ಪ್ರಸಕ್ತ ವರ್ಷವೇ ನಾಗ ಚೈತನ್ಯ ಶೋಭಿತಾ ಮದುವೆ ನಡೆಯಲಿದೆ. ಹಾಗಾಗಿ ಆ ಶುಭದಿನಕ್ಕೆ ಸಾಕ್ಷಿಯಾಗಲು ಪ್ರೇಮಪಕ್ಷಿಗಳು ಹೆಚ್ಚು ಕಾಯಬೇಕಾಗಿಲ್ಲ. ಡಿಸೆಂಬರ್ 4 ರಂದು ವಿವಾಹ ಸಮಾರಂಭ ನಡೆಯಲಿದೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.