ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿಯೂ ತಮ್ಮದೇ ಆದ ವಿಭಿನ್ನ ಐಡೆಂಟಿಟಿಯನ್ನು ಹೊಂದಿರುವ ಯತಿರಾಜ್ 'ಸಂಜು' ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಸಂಜು' ಶೀರ್ಷಿಕೆಯ ಚಿತ್ರ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ರೋಜ್ ಚಿತ್ರದ ಶ್ರಾವ್ಯ (ಸಾತ್ವಿಕ) ಹಾಗೂ ಯುವ ನಟ ಮನ್ವಿತ್ ಅಭಿನಯಿಸಿರುವ ಸಂಜು ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಾಥ್ ನೀಡಿದ್ದಾರೆ.
ಬಿಡುಗಡೆ ಹೊಸ್ತಿಲಿನಲ್ಲಿರುವ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅನ್ನು ಕನ್ನಡದ ಜನಪ್ರಿಯ ನಟ ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಹಿರಿಯ ನಿರ್ಮಾಪಕ ಸಾ.ರಾ ಗೋವಿಂದು, ಕೆ.ಮಂಜು, ನಿರ್ದೇಶಕ ಎಂ.ಡಿ.ಕೌಶಿಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ನಿರ್ದೇಶಕ ಯತಿರಾಜ್, "ಸಂಜು" ನನ್ನ ನಿರ್ದೇಶನದ ಆರನೇ ಚಿತ್ರ. ಈ ಚಿತ್ರಕ್ಕೆ ಅಗಮ್ಯ ಪಯಣಿಗ ಎಂಬ ಅಡಿ ಬರಹವಿದೆ. ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ ಇದು. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ನಮ್ಮ ಚಿತ್ರ ಪ್ರೇಕ್ಷಕನಿಗೆ ಮೋಸ ಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ನಾಯಕ ಮನ್ವಿತ್ ಮಾತನಾಡಿ, ನಾನು ಸಾಮಾನ್ಯ ರೈತನ ಮಗ. ನನ್ನ ಮೊದಲ ಚಿತ್ರವನ್ನು ಇಷ್ಟು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದಗಳು ಎಂದು ತಿಳಿಸಿದರು.