ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ಮಮತಾ ರಾಹುತ್ 'ಹೆಣ್ಣು ಭ್ರೂಣ ಹತ್ಯೆ' ಕುರಿತ ಸಿನಿಮಾ ಮಾಡುತ್ತಿರೋದು ನಿಮಗೆ ತಿಳಿದಿರೋ ವಿಚಾರ. ಈ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದೆ. ಇದೀಗ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲೊಂದಾದ ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ತಾರಿಣಿ ಚಿತ್ರದ ಅಭಿನಯಕ್ಕೆ ಮಮತಾ ರಾಹುತ್ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ಮತ್ತು "ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್" ಬಂದಿದೆ. ಒಟ್ಟು ಎರಡು ಪ್ರಶಸ್ತಿಗಳನ್ನು 'ತಾರಿಣಿ' ಚಿತ್ರ ಮುಡಿಗೇರಿಸಿಕೊಂಡಿದೆ. ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿ ಗಳಿಸುತ್ತಿರೋದು ಹೆಮ್ಮೆಯ ವಿಚಾರ.
ರಾಜಸ್ಥಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಮತಾ ರಾಹುತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿರುವುದು ಇಡೀ ತಂಡಕ್ಕೆ ಖುಷಿ ತಂದಿದೆ. ಗರ್ಭಿಣಿಯೊಬ್ಬಳ ಕಥೆಯಾಧಾರಿತ ಈ ಸಿನಿಮಾಗೆ ಮಮತಾ ರಾಹುತ್ ಕೂಡ ನೈಜ ಗರ್ಭಿಣಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದರು. ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಕಷ್ಟ ಎನಿಸಿದರೂ ಅದನ್ನು ಯಾರ ಬಳಿಯೂ ಹೇಳಿಕೊಳ್ಳದೇ ಚಿತ್ರೀಕರಣ ಮಾಡಲು ಸಂಪೂರ್ಣ ಸಹಕಾರ ನೀಡಿ, ದೃಶ್ಯ ಕಟ್ಟುವಲ್ಲಿ ಧೈರ್ಯ ತೋರಿದರು. ಅವರು ಗರ್ಭಿಣಿಯಾದ 7ನೇ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸಿ ಒಂಭತ್ತನೇ ತಿಂಗಳು ತುಂಬಿದಾಗಲೂ ಚಿತ್ರೀಕರಣ ಮಾಡುತ್ತಲೇ ಇದ್ದೆವು. ಮಗು ಹುಟ್ಟುವ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಅವರದ್ದೇ ಮಗುವನ್ನು ಚಿತ್ರಿಸಿಕೊಂಡಿದ್ದು ಮಾತ್ರ 'ಬೆಸ್ಟ್ ಮೆಮೊರಿ'. ನೈಜತೆಗೆ ಒತ್ತು ನೀಡುವುದು ಮುಖ್ಯ ಉದ್ದೇಶವಾಗಿದ್ದರಿಂದ, ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕರು ತಿಳಿಸಿದರು.
ಇನ್ನೂ ಈ ಚಿತ್ರದಲ್ಲಿ ರೋಹಿತ್ ಎಂಬ ಯುವ ಪ್ರತಿಭೆ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ, ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ, ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಅನಂತ್ ಆರ್ಯನ್ ಅವರು ಸಂಗೀತ ಸಂಯೋಜಿದ್ದರೆ, ದೀಪಕ್ ಸಂಕಲನ ನಿರ್ವಹಿಸಿದ್ದಾರೆ. ಕಲೆ ಬಸವರಾಜ್ ಆಚಾರ್ಯ ಅವರದ್ದು. ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ. "ಶ್ರೀ ಗಜನಿ ಪ್ರೊಡಕ್ಷನ್ಸ್" ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಅವರು ಬಂಡವಾಳ ಹೂಡಿ ಒಂದು ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.