ತಾರೆಗಳ ಮಕ್ಕಳು ಹಾಗೂ ಕುಟುಂಬಸ್ಥರು ಸಿನಿಮಾ ಇಂಡಸ್ಟ್ರಿಗೆ ಬರುವ ಟ್ರೆಂಡ್ ಎಲ್ಲ ಭಾಷೆಗಳಲ್ಲೂ ಇದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ಆ ಟ್ರೆಂಡ್ ಮುಂದುವರಿದಿದೆ ಕೂಡಾ. ಸದ್ಯ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರು 'ಸೆಕೆಂಡ್ ಆಫ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಸದ್ಯ ಸೂಪರ್ ಸ್ಟಾರ್ ಸಿನಿಮಾ ಮಾಡುತ್ತಿರುವ ನಿರಂಜನ್ ಸುಧೀಂದ್ರ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಹೆಸರು 'ಕ್ಯೂ' (Q). ವಿಭಿನ್ನ ಶೀರ್ಷಿಕೆಯ ಸಿನಿಮಾವನ್ನು ನಿರ್ದೇಶಕ ನಾಗಶೇಖರ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಬಾಲಿವುಡ್ನ 'ಮೈನೆ ಪ್ಯಾರ್ ಕಿಯಾ' ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಕನ್ನಡ ಚಿತ್ರರಂಗಕ್ಕೆ ಬರ್ತಿರುವುದು. ಈಗಾಗಲೇ ಅವಂತಿಕಾ ಮಿಥ್ಯಾ ಸಿನಿಮಾದಿಂದ ಬಾಲಿವುಡ್ನಲ್ಲಿ ಗಮನ ಸೆಳೆದಿದ್ದು, ಅವರ ಜೊತೆ ನಿರ್ದೇಶಕ ನಾಗಶೇಖರ್ ಮಾತುಕತೆ ನಡೆಸಿದ್ದಾರೆ.
ನಾಗಶೇಖರ್ ನಿರ್ದೇಶನದ ಬಹುನಿರೀಕ್ಷಿತ 'ಸಂಜು ವೆಡ್ಸ್ ಗೀತಾ 2' ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ಮಧ್ಯೆ ನಾಗಶೇಖರ್ ಈ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 3 ಭಾಷೆಗಳಲ್ಲಿ ಸಿನಿಮಾ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ.