ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಹೊತ್ತಲ್ಲಿ ಥಿಯೇಟರ್ಗೆ ಲಗ್ಗೆ ಇಟ್ಟು ಧೂಳೆಬ್ಬಿಸಿದ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿ ಸಿನಿಪ್ರೇಮಿಗಳ ಮನಗೆದ್ದಿದ್ದರು. ಚಂದನವನದ ಬಹುನಿರೀಕ್ಷಿತ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಈಗಾಗಲೇ ಶತಕ ಬಾರಿಸಿದೆ.
100 ದಿನ ಪ್ರದರ್ಶನ ಕಂಡಿದೆ ಈ ಚಿತ್ರ: ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದರೆ ಒಂದೇ ತಿಂಗಳಿಗೆ ಒಟಿಟಿ ಪ್ಲ್ಯಾಟ್ಫಾರ್ಮ್ಗೆ ಪ್ರವೇಶಿಸೋದು ಈಗ ಸಾಮಾನ್ಯವಾಗಿದೆ. ಆದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಈ ಚಿತ್ರ ಒಂದು ವಾರದ ಹಿಂದೆ ಸರಿಸುಮಾರು 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. 100 ದಿನ ಪ್ರದರ್ಶನಗೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಸಿಹಿ ನೀಡಿದೆ. ಈ ವರ್ಷ ನೂರು ದಿನ ಪ್ರದರ್ಶನಗೊಂಡ ಮೊದಲ ಸಿನಿಮಾವಾಗಿ ಹೊರಹೊಮ್ಮಿದೆ. ಈ ಯಶಸ್ಸಿನ ಸಿನಿಮಾ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ.
ಯಾವ ಒಟಿಟಿ?: 'ಸನ್ ನೆಕ್ಸ್ಟ್' ಡಿಜಿಟಲ್ ಪ್ರೀಮಿಯರ್ನಲ್ಲಿ ನವೆಂಬರ್ 29ರಿಂದ ಅಂದರೆ ನಾಳೆಯಿಂದಲೇ ಈ ಒಟಿಟಿಯಲ್ಲಿ 'ಕೃಷ್ಣಂ ಪ್ರಣಯ ಸಖಿ' ಲಭ್ಯ. ಫ್ಯಾಮಿಲಿ ಎಂಟರ್ಟೈನ್ ಆಗಿರುವ ಈ ಚಿತ್ರ ಮತ್ತೊಮ್ಮೆ ನಿಮ್ಮ ಮನ ಗೆಲ್ಲಲಿದೆ. ಮುದ ನೀಡುವ ಹಾಡುಗಳು, ಹಾಸ್ಯ, ಪ್ರೇಮ ಸಲ್ಲಾಪದ ಜೊತೆ ಸಾಗುವ ಅನಿರೀಕ್ಷಿತ ಪಯಣವನ್ನು ನೀವಿದ್ದ ಜಾಗದಲ್ಲೇ ನೋಡಿ ಆನಂದಿಸಬಹುದಾಗಿದೆ.