ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರಮಂದಿರ ಪ್ರವೇಶಿಸಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಗೆಲುವಿನ ನಗೆ ಬೀರಿದೆ. ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲೂ ಯಶ ಸಾಧಿಸಿದೆ. ಸದ್ಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಬಹುತೇಕ ಪ್ರೇಕ್ಷಕರು ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಆಗಸ್ಸ್ 15ರಂದು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ಚಿತ್ರ 5 ದಿನಗಳಲ್ಲಿ 8 ಕೋಟಿ ರೂ ಕಲೆಕ್ಷನ್ ಮಾಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈವರೆಗೆ 8.11 ಕೋಟಿ ರೂ. ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 7.09 ಕೋಟಿ ರೂಪಾಯಿ. ಚಿತ್ರ ತೆರೆಕಂಡ ಮೊದಲ ದಿನ 1.5 ಕೋಟಿ ರೂಪಾಯಿ, ಎರಡನೇ ದಿನ 0.85 ಕೋಟಿ ರೂ., ಮೂರನೇ ದಿನ 1.7 ಕೋಟಿ ರೂಪಾಯಿ, ನಾಲ್ಕನೆ ದಿನ 2.18 ಕೋಟಿ ರೂಪಾಯಿ, ಐದನೇ ದಿನ ಅಂದರೆ ಸೋಮವಾರ 0.76 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ ಟೋಟಲ್ ನೆಟ್ ಕಲೆಕ್ಷನ್ 7.09 ಕೋಟಿ ರೂ. ಆಗಿದೆ. ಸಿನಿಮಾದ ಗ್ರಾಸ್ ಕಲೆಕ್ಷನ್ 8.11 ಕೋಟಿ ರೂಪಾಯಿ.
ಗಣೇಶ್ ಪೋಸ್ಟ್: ಇತ್ತೀಚೆಗೆ ವಿಡಿಯೋ ಶೇರ್ ಮಾಡಿದ್ದ ಗಣಿ, 'ಒಂದು ಅಭೂತಪೂರ್ವ ಯಶಸ್ಸಿಗೆ ಕಾರಣೀಭೂತರಾದವರು ನೀವು. ನಿಮಗಿದೋ ನನ್ನ ನಮಸ್ಕಾರ..ನಮಸ್ಕಾರ...ನಮಸ್ಕಾರ' ಎಂದು ಬರೆದುಕೊಂಡಿದ್ದರು.
ಸಿನಿಮಾವೊಂದರ ಶೀರ್ಷಿಕೆ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವ ಮೊದಲ ಕಂಟೆಂಟ್. ನಂತರ ಟೀಸರ್, ಟ್ರೇಲರ್ ಈ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಳ್ಳುತ್ತವೆ. ಅದರಂತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ 'ಕೃಷ್ಣಂ ಪ್ರಣಯ ಸಖಿ' ಶೀರ್ಷಿಕೆ ಯಶಸ್ವಿಯಾಗಿತ್ತು. ಆದ್ರೆ ಟ್ರೇಲರ್ ಬಿಡುಗಡೆಗೊಳಿಸದೇ ಡೈರೆಕ್ಟ್ ಸಿನಿಮಾ ರಿಲೀಸ್ ಮಾಡೋ ಮೂಲಕ 'ಕೃಷ್ಣಂ ಪ್ರಣಯ ಸಖಿ' ತಂಡ ಗಮನ ಸೆಳೆದಿತ್ತು. ಗುರುವಾರದಂದು ತೆರೆಗಪ್ಪಳಿಸಿದ ಚಿತ್ರ ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ. ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಪ್ರೇಕ್ಷಕರು, ಚಿತ್ರತಂಡದ ನಿರೀಕ್ಷೆಯನ್ನು ನಿಜವಾಗಿಸಿದ್ದಾರೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೊಸತನದಿಂದ ಕೂಡಿರುವ 'ಕೃಷ್ಣಂ ಪ್ರಣಯ ಸಖಿ' ತೆರೆಕಂಡ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈಗಲೂ ಹಲವೆಡೆ ಉತ್ತಮ ಪ್ರದರ್ಶನ ನಡೆಯುತ್ತಿದೆ.