ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್(ಕೆಟಿಆರ್) ಕಾರಣವೆಂದು ಹೇಳಿಕೆ ನೀಡಿದ್ದ ಸಚಿವೆ ಕೊಂಡಾ ಸುರೇಖಾ ವಿರುದ್ಧ ಸ್ವತಃ ಸಮಂತಾ 'ನನ್ನ ಹೆಸರನ್ನು ರಾಜಕೀಯದಿಂದ ದೂರವಿಡಿ' ಎಂದ ಬೆನ್ನಲ್ಲೇ ಸಚಿವೆ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಅವರಲ್ಲಿ ಕ್ಷಮೆ ಯಾಚಿಸಿರುವ ಸಚಿವೆ ಕೊಂಡಾ ಸುರೇಖಾ ಅವರು, "ನಿಮ್ಮ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ನಾಯಕರೊಬ್ಬರು ಮಹಿಳೆಯರನ್ನು ಕೀಳಾಗಿ ಕಾಣುವ ಧೋರಣೆಯನ್ನು ಪ್ರಶ್ನಿಸುವುದು ಉದ್ದೇಶವಾಗಿತ್ತೇ ಹೊರತು ನಿಮ್ಮ(ಸಮಂತಾ ರುತ್ ಪ್ರಭು) ಭಾವನೆಗಳನ್ನು ನೋಯಿಸುವುದಲ್ಲ. ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲ ಅದು ಆದರ್ಶವೂ ಆಗಿದೆ. ನನ್ನ ಕಾಮೆಂಟ್‌ಗಳಿಂದ ನೀವು ಮತ್ತು ನಿಮ್ಮ ಅಭಿಮಾನಿಗಳು ಮನನೊಂದಿದ್ದರೆ ಬೇಷರತ್ತಾಗಿ ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ. ಮತ್ತು ಅನ್ಯಥಾ ಭಾವಿಸಬೇಡಿ ಎಂದು" ಟ್ವೀಟ್ ಮಾಡಿದ್ದಾರೆ.
ಕೊಂಡಾ ಸುರೇಖಾ ಹೇಳಿದ್ದೇನು ?:ತೆಲಂಗಾಣ ಅರಣ್ಯ ಹಾಗೂ ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಹೈದರಾಬಾದ್‌ನ ಲಾಂಗರ್‌ಹೌಸ್‌ನಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಬಿಆರ್ಎಸ್ ನಾಯಕನ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಕೆಟಿಆರ್ ಒಬ್ಬ ಮಾದಕ ದ್ರವ್ಯಗಳ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ತಾನು ಡ್ರಗ್ಸ್ ತೆಗೆದುಕೊಳ್ಳುವುದಲ್ಲದೇ, ಚಿತ್ರರಂಗದ ನಾಯಕಿಯರಿಗೂ ಈ ಚಟವನ್ನು ಕಲಿಸಿದ್ದಾರೆ. ಇವರ ದೌರ್ಜನ್ಯದಿಂದಾಗಿ ಹಲವು ನಾಯಕಿಯರು ಸಿನಿಮಾ ಕ್ಷೇತ್ರವನ್ನೇ ತೊರೆದಿದ್ದಾರೆ. ಇನ್ನು ಕೆಲವರು ಮದುವೆಯಾಗಿದ್ದಾರೆ ಎಂದು ಹೇಳಿದ್ದರು. ನಾಗಾರ್ಜುನ ಒಡೆತನದ ಎನ್- ಕನ್ವೆನ್ಷನ್ ಸೆಂಟರ್ ಬೇಡ ಎಂಬುದಾದರೆ ತನ್ನ ಬಳಿಗೆ ಅವರನ್ನು ಕಳುಹಿಸುವಂತೆ ಮಾಜಿ ಸಚಿವ ಕೆಟಿಆರ್ ನಟ ನಾಗಾರ್ಜುನ ಬಳಿ ಬೇಡಿಕೆ ಇಟ್ಟಿದ್ದ. ಅವರ ಬಳಿ ಹೋಗುವಂತೆ ನಟಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ವಿರೋಧಿಸಿದ್ದರು. ಇದೇ ವಿಚಾರಕ್ಕಾಗಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದರು ಎಂದು ವಿವಾದಿತ ಹೇಳಿಕೆ ನೀಡಿದ್ದರು.