ಕರ್ನಾಟಕ

karnataka

ETV Bharat / entertainment

ಅಭಿನಯ ಚಕ್ರವರ್ತಿ ಸುದೀಪ್​ಗೆ ಡಾಲಿ ನಟನೆಯ 'ಕೋಟಿ' ಚಿತ್ರದ ಮೊದಲ‌ ಟಿಕೆಟ್ - Kotee First Ticket - KOTEE FIRST TICKET

ಬಹುನಿರೀಕ್ಷಿತ 'ಕೋಟಿ' ಚಿತ್ರದ ಮೊದಲ ಟಿಕೆಟ್​ ಅನ್ನು ತಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನೀಡಿದೆ.

sudeep got Kotee movie's first ticket
ಸುದೀಪ್​ಗೆ 'ಕೋಟಿ' ಚಿತ್ರದ ಮೊದಲ‌ ಟಿಕೆಟ್ (ETV Bharat)

By ETV Bharat Karnataka Team

Published : Jun 8, 2024, 1:14 PM IST

ಡಾಲಿ‌ ಧನಂಜಯ್​​ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೋಟಿ'. ಮುಂದಿನ ಶುಕ್ರವಾರ ತೆರೆ ಕಾಣಲಿರುವ ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಸಿನಿಮಾದ ಮೊದಲ‌ ಟಿಕೆಟ್​ ಅನ್ನು ಚಿತ್ರತಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನೀಡಿದೆ.

ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಕೋಟಿ ಸಿನಿಮಾದ ವಿಶೇಷ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್ ನಟ ಸುದೀಪ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆ ಮೇಲಿದ್ದು,‌ ಪ್ರೇಕ್ಷಕರನ್ನು ರಂಜಿಸಿದರು. ಇದೇ ವೇದಿಕೆಯಲ್ಲಿ ಚಿತ್ರತಂಡ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೋಟಿ ಚಿತ್ರದ ಮೊದಲ ಟಿಕೆಟ್​ ಹಸ್ತಾಂತರಿಸಿತು. ಚಿತ್ರದ ಹೊಸ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ ಕಿಚ್ಚ, ನಾಯಕ ನಟ ಧನಂಜಯ್ ಮತ್ತು ನಿರ್ದೇಶಕ ಪರಮ್ ಸೇರಿ ಚಿತ್ರತಂಡಕ್ಕೆ ಯಶಸ್ಸು‌ ಸಿಗಲಿ ಎಂದು ಶುಭ ಹಾರೈಸಿದರು.

ಈಗಾಗಲೇ ಕೋಟಿ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಭಾರಿ ಮೆಚ್ಚುಗೆ ಗಳಿಸುತ್ತಿದೆ. ಡಾಲಿ ಧನಂಜಯ್ 'ಕೋಟಿ' ಎಂಬ ಓರ್ವ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಈತನದ್ದು. ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೇ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕಥೆಯಾದ 'ಕೋಟಿ' ಗೆಲ್ಲುವ ಭರವಸೆಯಾಗಿ ಕಂಡಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ್​​ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ:ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್​ಗೆ ಭಾರತ ರತ್ನ ನೀಡುವಂತೆ ನಿರ್ದೇಶಕ ರಾಜಮೌಳಿ ಒತ್ತಾಯ - Ramoji Rao

ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾ ಮ್ಯಾನ್​​​.

ಇದನ್ನೂ ಓದಿ:'ಕೋಟಿ' ಟ್ರೇಲರ್​​ಗೆ ಸಿನಿಪ್ರಿಯರು ಫಿದಾ: ಮುಂದಿನ ಶುಕ್ರವಾರ ಡಾಲಿ ಸಿನಿಮಾ ತೆರೆಗೆ - Kotee Trailer

ಕೋಟಿ ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು, ನಿರ್ದೇಶಿಸಿದ್ದಾರೆ. ಇದೇ ಜೂನ್‌ 14ರಂದು, ಮುಂದಿನ ಶುಕ್ರವಾರ ಕೋಟಿ ಚಿತ್ರಮಂದಿರ ಪ್ರವೇಶಲಿದೆ.

ABOUT THE AUTHOR

...view details