ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕಲಾವಿದರ ಸಂಘದ ಜತೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಅಧ್ಯಕ್ಷ ಎನ್.ಎಂ ಸುರೇಶ್ ಬುಧವಾರದಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂಬ ಸುಳಿವು ಬಿಟ್ಟುಕೊಟ್ಟರು.
ದರ್ಶನ್ ವಿರುದ್ಧ ಕೆಎಫ್ಸಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ತಮ್ಮನ್ನು ಭೇಟಿ ಮಾಡಿದ ಕೆಲ ಕನ್ನಡ ಪರ ಸಂಘಟನೆಗಳ ಸದಸ್ಯರಿಗೆ ಸುರೇಶ್ ಪ್ರತಿಕ್ರಿಯಿಸಿದರು. ದರ್ಶನ್ ನಟನೆಯ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು, ಅವರನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿ ಬಂತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರೋದ್ಯಮ ಮತ್ತು ಫೆಡರೇಶನ್ನ "ಮೌನ"ವನ್ನೂ ಪ್ರಶ್ನಿಸಿದರು.
ದರ್ಶನ್ ಅಭಿಮಾನಿಯಾಗಿದ್ದ 33ರ ಹರೆಯದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರ್ಶನ್ ಹಾಗೂ ಅವರ 12 ಮಂದಿ ಸಹವರ್ತಿಗಳನ್ನು ಮಂಗಳವಾರದಂದು ಬಂಧಿಸಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರು ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರ ಸೋಷಿಯಲ್ ಮೀಡಿಯಾ ಅಕೌಂಟ್ನ ಕಾಮೆಂಟ್ ಸೆಕ್ಷನ್ನಲ್ಲಿ ಪ್ರತಿಕ್ರಿಯಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮೃತರು "ಅಸಭ್ಯ ಭಾಷೆ" ಬಳಸಿದ್ದಾರೆ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಎಂಬ ಆರೋಪಗಳಿವೆ.
ಮಾಧ್ಯಮದವರೊಂದಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಪ್ರತಿಕ್ರಿಯಿಸಿ, "ಮೊದಲು ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿಚ್ಛಿಸುತ್ತೇವೆ. ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ದಯವಿಟ್ಟು ಚಲನಚಿತ್ರ ವಾಣಿಜ್ಯ ಮಂಡಳಿ ಸುಮ್ಮನಿದೆ ಎಂದು ಹೇಳಬೇಡಿ. ಅದನ್ನು ಒಪ್ಪುವುದಿಲ್ಲ'' ಎಂದು ತಿಳಿಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಕಾನೂನು ಪ್ರಕಾರ ಪ್ರಕರಣದ ಸೂಕ್ತ ತನಿಖೆ ನಡೆಸಿ ಸತ್ಯಾನುಸತ್ಯತೆಯನ್ನು ಹೊರತರುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರನ್ನು ಕಾನೂನು ಪ್ರಕಾರ ನಿರ್ದಾಕ್ಷಣ್ಯವಾಗಿ ಶಿಕ್ಷಿಸಬೇಕು ಎಂದು ನಾವೂ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.