ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್'. ಅಪಾರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಕೂಡ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಇತ್ತೀಚೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಿಗ್ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಯಶ್ ಮುಂದಿನ ಸಿನಿಮಾ 'ಟಾಕ್ಸಿಕ್'ನಲ್ಲಿ ನಟಿಯ ಸಂಭಾವ್ಯ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಊಹಾಪೋಹಗಳು ಹುಟ್ಟಿಕೊಂಡಿವೆ.
ಹಿಂದಿನ ವರದಿಗಳು, ಟಾಕ್ಸಿಕ್‌ನಲ್ಲಿ ಯಶ್ ಅವರೊಂದಿಗೆ ಕರೀನಾ ತೆರೆ ಹಂಚಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದವು. ಚಿತ್ರನಿರ್ಮಾಪಕರು ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆಂದು ವರದಿಗಳು ತಿಳಿಸಿದ್ದವು. ಈ ವರದಿಗಳು, ಅಭಿಮಾನಿಗಳು ಅಧಿಕೃತ ಘೋಷಣೆಗೆ ಕಾತರದಿಂದ ಕಾಯುವಂತೆ ಮಾಡಿತ್ತು.
ಇದೀಗ ಶೇರ್ ಆಗಿರೋ ವಿಡಿಯೋವೊಂದರಲ್ಲಿ, ಕರೀನಾ ತಮ್ಮ ಅಭಿಮಾನಿಗಳೊಂದಿಗೆ ಝೂಮ್ ಸೆಷನ್‌ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಬಗ್ಗೆ ಮಾತನಾಡುತ್ತಿರುವುದನ್ನು ತೋರಿಸಿದೆ. ಈ ಬಗ್ಗೆ ನಟಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ನಾನು ಹೇಳಿದಂತೆ, ನಾನು ಬಿಗ್ ಸೌತ್ ಪ್ರೊಜೆಕ್ಟ್ ಮಾಡುತ್ತಿರಬಹುದು. ಪ್ಯಾನ್-ಇಂಡಿಯಾ ಸಿನಿಮಾ. ಹಾಗಾಗಿ ನಾನು ಎಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ಇದನ್ನು ಮಾಡುತ್ತಿದ್ದೇನೆ'' ಎಂದು ಮಾತನಾಡಿರುವ ವಿಡಿಯೋ ಅದಾಗಿದೆ.