ಕರ್ನಾಟಕ

karnataka

ETV Bharat / entertainment

ನಾಗರಾಜ್ ಪೀಣ್ಯರ 'ಅತಿಕಾಯ'ದಲ್ಲಿ ಉಗ್ರಾವತಾರ ತಾಳಿದ ನಿರೂಪ್ ಭಂಡಾರಿ - Atikaya - ATIKAYA

ನಿರ್ದೇಶಕ ನಾಗರಾಜ್ ಪೀಣ್ಯ ಅತಿಕಾಯ ಎಂಬ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದು, ರಂಗಿತರಂಗ ನಾಯಕ ಹಿರೋ ಪಾತ್ರದಲ್ಲಿ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಸದ್ಯ ಚಿತ್ರತಂಡ ಫಸ್ಟ್ ಲುಕ್‌ ಬಿಟ್ಟಿದ್ದಾರೆ.

ನಾಗರಾಜ್ ಪೀಣ್ಯರ 'ಅತಿಕಾಯ'ದಲ್ಲಿ ಉಗ್ರಾವತಾರ ತಾಳಿದ ನಿರೂಪ್ ಭಂಡಾರಿ
ನಾಗರಾಜ್ ಪೀಣ್ಯರ 'ಅತಿಕಾಯ'ದಲ್ಲಿ ಉಗ್ರಾವತಾರ ತಾಳಿದ ನಿರೂಪ್ ಭಂಡಾರಿ (ETV Bharat)

By ETV Bharat Karnataka Team

Published : Aug 18, 2024, 7:26 AM IST

ಸಿನಿಮಾ ಮಾಡುವುದು ನೋಡಿದಷ್ಟು ಸುಲಭವಲ್ಲ. ಅದೊಂದು ಅದ್ಭುತ ಪ್ರಕ್ರಿಯೆ. ಇಲ್ಲಿ ಪ್ರತಿದಿನ ಹತ್ತಾರು ಜನ ಕನಸುಗಳನ್ನು ಹೊತ್ತು ಬರುತ್ತಾರೆ. ಗಾಂಧಿನಗರದಲ್ಲಿ ತಮ್ಮ ಕನಸು ಬಿತ್ತುತ್ತಾರೆ. ಕೆಲವರಿಗೆ ಫಲ ಬೇಗ ಸಿಗುತ್ತೆ. ಇನ್ನೂ ಕೆಲವರ ಪಾಲಿಗೆ ತಾಳ್ಮೆಯ ಪರೀಕ್ಷೆ ನಡೆಯುತ್ತೆ. ಈ ಎರಡನೇ ಸಾಲಿನಲ್ಲಿ ನಿಲ್ಲುವವರಲ್ಲಿ ನಾಗರಾಜ್ ಪೀಣ್ಯ ಕೂಡ ಒಬ್ಬರು.

ಬಂಡಿ ಮಂಕಾಳಮ್ಮನ ಆಶೀರ್ವಾದ ಪಡೆದ ಚಿತ್ರತಂಡ (ETV Bharat)

ಹೌದು.. ಸಿನಿಮಾವನ್ನೇ ಉಸಿರಾಗಿಸಿಕೊಂಡು ಎಂಥಹದ್ದೇ ಅಡೆತಡೆ ಬಂದರೂ, ಬಿಡದೇ ಪ್ರಯತ್ನವನ್ನು ಮಾಡುತ್ತಾ, ಸಿನಿಮಾ ಹೊರತುಪಡಿಸಿ ಬೇರೇನೂ ಮಾಡಲಾರೆ ಎಂದು ಹೋರಾಟವನ್ನು ಮಾಡಿದವರು ನಾಗರಾಜ್ ಪೀಣ್ಯ. ಇಂಥಾ ನಾಗರಾಜ್ ಪೀಣ್ಯ ಈ ಹಿಂದೆ "ಪದೇ ಪದೇ", "ನಮಕ್ ಹರಾಮ್​​", "ಭೂತಯ್ಯನ ಮೊಮ್ಮಗ ಅಯ್ಯು" ಚಿತ್ರಗಳನ್ನು ನಿರ್ದೇಶಿಸಿದ್ದರು.

ನಿರ್ದೇಶಕ ನಾಗರಾಜ್ ಪೀಣ್ಯರೊಂದಿಗೆ ನಟ ನಿರೂಪ್ ಭಂಡಾರಿ (ETV Bharat)

ಆದರೆ, ಅದೃಷ್ಟ-ದುರಾದೃಷ್ಟ ಎಲ್ಲ ಅವರವರಿಗೆ ಬಿಟ್ಟಿದ್ದಾದರೂ ನಾಗರಾಜ್ ಪೀಣ್ಯ ಅವರಿಗೆ ಅಂದುಕೊಂಡ ಯಶಸ್ಸು ಸಿಗಲಿಲ್ಲ. ಹಾಗಂಥ ಇವರು ವಿಶ್ವಾಸವನ್ನೂ ಕಳೆದುಕೊಂಡಿಲ್ಲ. ಕಳೆದುಕೊಂಡ ಜಾಗದಲ್ಲಿಯೇ ಮತ್ತೆ ಪಡೆಯಬೇಕು ಎಂಬ ಆಸೆಯೊಂದಿಗೆ ಮರಳಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೊಸ ಚಿತ್ರವೊಂದನ್ನು ಶುರು ಮಾಡಿದ್ದಾರೆ. ಅದಕ್ಕೆ ಇವರು ಇಟ್ಟಿರುವ ಹೆಸರು "ಅತಿಕಾಯ".

ಇನ್ನು, ಈ ಚಿತ್ರದ ವಿಶೇಷ ಅಂದರೆ, ಈ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ನಿರೂಪ್ ಭಂಡಾರಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ತಮ್ಮ ಉಗ್ರಾವತಾರದ ಮೂಲಕ ಮಾಸ್​ ಪ್ರೇಕ್ಷಕರ ಹೃದಯವನ್ನು ಗೆಲ್ಲಲು ಈ ಕ್ಲಾಸ್ ಆಕ್ಟರ್ ರೆಡಿಯಾಗಿದ್ದಾರೆ. ಬಂಡಿ ಮಂಕಾಳಮ್ಮನ ಆಶೀರ್ವಾದ ಪಡೆದು, ದೇವಿಯ ಸನ್ನಿಧಿಯಲ್ಲಿ ನಿಂತು ಮೊನ್ನೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಮ್ಮನ್ನು ಇಷ್ಟಪಡುವ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳ ಮಡಿಲಿಗೆ ಚಿತ್ರದ ಫಸ್ಟ್ ಲುಕ್‌ನ್ನೂ ಹಾಕಿದ್ದಾರೆ. ವಿಶೇಷ ಅಂದರೆ ಸಹೋದರನ ಈ ಹೊಸ ಸವಾಲನ್ನು ಕಂಡು, ಅನೂಪ್ ಭಂಡಾರಿ ಕೂಡ ಥ್ರಿಲ್ ಆಗಿದ್ದಾರೆ.

'ಅತಿಕಾಯ' ಸಿನಿಮಾ ನಾಯಕನ ಫಸ್ಟ್​ ಲುಕ್​ (ETV Bharat)

ಅಂದ ಹಾಗೇ, ಅತಿಕಾಯ ಲಂಕಾಸುರ ರಾವಣನ ಮಗ. ಬ್ರಹ್ಮನನ್ನು ಒಲಿಸಿ ಬ್ರಹ್ಮಾಸ್ತ್ರವನ್ನು ಪಡೆದ ಈ ಪರಮ ಪರಾಕ್ರಮಿ ಈ ಅಸ್ತ್ರವನ್ನು ರಾಮ-ರಾವಣರ ಯುದ್ಧದಲ್ಲಿ ಲಕ್ಷ್ಮಣನ ಮೇಲೆ ಪ್ರಯೋಗಿಸಿದ್ದನು ಎಂಬ ಉಲ್ಲೇಖ ಪುರಾಣದಲ್ಲಿದೆ. ಇಂತಹ ಅತಿಕಾಯನ ಹೆಸರನ್ನು ಚಿತ್ರಕ್ಕೆ ಶೀರ್ಷಿಕೆಯನ್ನಾಗಿಡುವ ಮೂಲಕ ನಾಗರಾಜ್ ಪೀಣ್ಯ ಕುತೂಹಲವನ್ನು ಕೆರಳಿಸಿದ್ದಾರೆ. ನಿರೂಪ್ ಭಂಡಾರಿಯವರ ವೃತ್ತಿ ಬದುಕಿನ ಮೊದಲ ಮಾಸ್​ ಸಿನಿಮಾದ ಕುರಿತು ಹಲವು ಪ್ರಶ್ನೆಗಳನ್ನು ಕೂಡ ಹುಟ್ಟು ಹಾಕಿದ್ದಾರೆ.

ಉಳಿದಂತೆ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಸದ್ದಿಲ್ಲದೇ ನಾಗರಾಜ್ ಪೀಣ್ಯ ಮತ್ತು ನಿರೂಪ್ ಭಂಡಾರಿ ಮುಗಿಸಿದ್ದಾರೆ. ಇನ್ನು ನಾಗರಾಜ್ ಪೀಣ್ಯ ಅವರ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಈ ಚಿತ್ರಕ್ಕೂ ಸಂಗೀತವನ್ನು ನೀಡುತ್ತಿದ್ದಾರೆ. ಇವಿಷ್ಟು ವಿಚಾರಗಳನ್ನು ಹೊರತುಪಡಿಸಿ, ಮಿಕ್ಕ ಎಲ್ಲ ವಿಚಾರವನ್ನು ಗೌಪ್ಯವಾಗಿ ಇಟ್ಟಿರುವ ಚಿತ್ರದ ನಿರ್ದೇಶಕ ನಾಗರಾಜ್ ಪೀಣ್ಯ ಸದ್ಯದಲ್ಲಿಯೇ ಚಿತ್ರದ ಉಳಿದ ವಿವರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಪ ವಿರಾಮದ ನಂತರ ಮತ್ತೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ಟಗರು ಪಲ್ಯ ನಟಿ ಅಮೃತಾ ಪ್ರೇಮ್ - Amrutha Prem Next movie

ABOUT THE AUTHOR

...view details