ಅಯೋಧ್ಯೆ (ಉತ್ತರಪ್ರದೇಶ) :ಅಯೋಧ್ಯೆಯಲ್ಲಿ ನಾಳೆ (ಜನವರಿ 22) ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆಹ್ವಾನಿತ ನಟ, ನಟಿಯರು ರಾಮಜನ್ಮಭೂಮಿಗೆ ಈಗಾಗಲೇ ಬಂದಿಳಿದಿದ್ದು, ನಟಿ ಕಂಗನಾ ರಣಾವತ್ ಕೂಡ ಅಯೋಧ್ಯೆಗೆ ಬಂದಿದ್ದಾರೆ. ಇಲ್ಲಿನ ಹನುಮಾನ್ ಗಢಿ ದೇಗುಲದಲ್ಲಿ ಸೇವಾ ಕಾರ್ಯ ನಡೆಸಿದ್ದಾರೆ.
ಕ್ವೀನ್ ನಟಿ ಕಂಗನಾ ಭಾನುವಾರ ಇಲ್ಲಿನ ಹನುಮಾನ್ ಗಢಿ ದೇವಸ್ಥಾನದ ಮಹಡಿಗಳನ್ನು ಗುಡಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಅಯೋಧ್ಯೆಗೆ ಬಂದಿಳಿದ ನಟಿ ಶ್ರೀರಾಮಭದ್ರಾಚಾರ್ಯರನ್ನು ಮೊದಲು ಭೇಟಿ ಮಾಡಿದರು. ಭದ್ರಾಚಾರ್ಯರು ನಟಿಗೆ ಆಶೀರ್ವದಿಸಿದರು. ಇದರ ಸರಣಿ ಚಿತ್ರಗಳನ್ನೂ ಕಂಗನಾ ಹಂಚಿಕೊಂಡಿದ್ದಾರೆ.
ಭಗವಾನ್ ರಾಮನ ಭಕ್ತ ಹನುಮಾನ್ನ ದೇವಸ್ಥಾನದಲ್ಲಿ ಭಕ್ತಸಮೂಹದ ನಡುವೆಯೂ ಸೇವಾ ಕಾರ್ಯ ನಡೆಸಲಾಯಿತು ಎಂದು ಅವರು ಹಂಚಿಕೊಂಡ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಸುಂದರವಾದ ಬಾಲರಾಮನ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಶ್ಲಾಘಿಸಿದರು.
ಮಿತಿಯಿಲ್ಲದ ಸಂತಸ:ಇದಕ್ಕೂ ಮೊದಲು ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ್ದ ನಟಿ ಕಂಗನಾ ರಣಾವತ್, ಇದು ನವ ಯುಗದ ಪ್ರಾರಂಭವನ್ನು ಪ್ರತಿನಿಧಿಸುತ್ತದೆ. ರಾಮಮಂದಿರ ಕೇವಲ ಕಟ್ಟಡವಲ್ಲ. ಬದಲಿಗೆ ಅಗಾಧ ಪ್ರಜ್ಞೆಯ ಸಾಕಾರ ಕ್ಷಣ. ಹಾಗಾಗಿ ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಮಿತಿಯಿಲ್ಲದ ಸಂತಸ, ವರ್ಣನಾತೀತ ಸಂತೋಷ ಸೃಷ್ಟಿಸುತ್ತದೆ ಎಂದರು.