ಹೈದರಾಬಾದ್: 'ಕೆಲವು ಸೆಲೆಬ್ರಿಟಿಗಳು ಇತ್ತೀಚೆಗೆ ಡಾರ್ಕ್ ವೆಬ್ ಎಂಬ ತಂತ್ರಾಂಶ ಬಳಸಿ ವಾಟ್ಸಪ್ ನಂತಹ ಸಂವಹನ ಅಪ್ಲಿಕೇಶನ್‌ಗಳನ್ನು ಹ್ಯಾಕ್ ಮಾಡುತ್ತಾರೆ' ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಣಾವತ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು, ಚಿತ್ರರಂಗದ ವ್ಯಕ್ತಿಗಳ ಮೇಲೆ ಈ ಗಂಭೀರ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕೆಲವು ನೆಟ್ಟಿಗರು ಇದ್ದರೂ ಇರಬಹುದೆಂದು ನಟಿಯ ಪರ ಬ್ಯಾಟ್ ಬೀಸಿದರೆ, ಇನ್ನೂ ಕೆಲವರು ನಂಬಲು ಅಸಾಧ್ಯವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರೊಬ್ಬರ ಪ್ರಶ್ನೆಯುಳ್ಳ ಪೋಸ್ಟ್ ಅನ್ನು ಮರು ಟ್ಯಾಗ್ ಮಾಡಿಕೊಂಡಿರುವ ನಟಿ ಕಂಗನಾ, ''ಅದ್ಭುತ!! ಡಾರ್ಕ್ ವೆಬ್ ಬಗ್ಗೆ ಕೇಂದ್ರವು ಏನಾದರೂ ಮಾಡಬೇಕು. ಕೆಲವು ಪ್ರಭಾವಿ ವ್ಯಕ್ತಿಗಳು ಡಾರ್ಕ್ ವೆಬ್ ಮೂಲಕ ವಾಟ್ಸಪ್ ಮತ್ತು ಇಮೇಲ್‌ಗಳಂತಹ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೇಂದ್ರವು ಡಾರ್ಕ್ ವೆಬ್ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು. ಅನೇಕ ಜನಪ್ರಿಯ ಚಿತ್ರರಂಗದ ವ್ಯಕ್ತಿಗಳು ಇದಕ್ಕೆ ವ್ಯಸನಿಯಾಗಿದ್ದಾರೆ. ಅವರು ಅಲ್ಲಿಂದ ಕಾನೂನುಬಾಹಿರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬರ ವಾಟ್ಸಪ್ ಮತ್ತು ಇ-ಮೇಲ್‌ನಂತಹ ಸಂವಹನಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಭೇದಿಸಿದರೆ ಅನೇಕ ದೊಡ್ಡ ಹೆಸರುಗಳು ಬಹಿರಂಗಗೊಳ್ಳುತ್ತವೆ. ತಪ್ಪಿತಸ್ಥರು ಅಂತ ಕಂಡುಬಂದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಕೇಂದ್ರ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು'' ಎಂದಿದ್ದಾರೆ.