ಬಹುದಿನಗಳ ಕಾತರಕ್ಕಿಂದು ತೆರೆಬಿದ್ದಿದೆ. ಅಂತಿಮವಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಿಗ್ ಪ್ರಾಜೆಕ್ಟ್ 'ಕಲ್ಕಿ 2898 ಎಡಿ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಪ್ರೇಕ್ಷಕರಿಂದ ಸಿನಿಮಾ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದೆ. 'ಕಲ್ಕಿ 2898 ಎಡಿ'ಯು ಭವಿಷ್ಯದ ಅಂಶಗಳೊಂದಿಗೆ ಪುರಾಣದ ಸುಂದರ ಮಿಶ್ರಣವೆಂದು ಸಿನಿಪ್ರಿಯರು ಶ್ಲಾಘಿಸಿದ್ದಾರೆ. ಸಿನಿಮಾ ಬಹುತೇಕ ಗೆಲ್ಲುವ ಸುಳಿವನ್ನು ಬಿಟ್ಟುಕೊಟ್ಟಿದೆ.
ಸೋಷಿಯಲ್ ಮೀಡಿಯಾದಲ್ಲಿಂದು ಕಲ್ಕಿಯದ್ದೇ ಸದ್ದು. ನೆಟ್ಟಿಗರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ, ಸೆಲೆಬ್ರೇಶನ್ನ ವಿಡಿಯೋಗಳೂ ಶೇರ್ ಆಗುತ್ತಿವೆ. ಆ ಪೈಕಿ ಬಿಗ್ ಸ್ಕ್ರೀನ್ನ ಫೋಟೋಗಳೂ ಹೊರಬಿದ್ದಿವೆ. ಚಿತ್ರಮಂದಿರಗಳಿಂದ ಫೋಟೋ ಹಂಚಿಕೊಂಡು, ಸಿನಿಪ್ರಿಯರು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ.
ಆ ಪೈಕಿ ಫೋಟೋವೊಂದರಲ್ಲಿ, ಚಿತ್ರ ತಯಾರಕರು ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ದಿವಂಗತ ರಾಮೋಜಿ ರಾವ್ ಮತ್ತು ಪ್ರಭಾಸ್ ಅವರ ದೊಡ್ಡಪ್ಪ- ಮಾರ್ಗದರ್ಶಕ ದಿವಂಗತ ಯು ಕೃಷ್ಣಂ ರಾಜು ಅವರಿಗೆ ಗೌರವ ಸಲ್ಲಿಸಿರೋದನ್ನು ಕಾಣಬಹುದು. ಹೃತ್ಪೂರ್ವಕ ಶ್ರದ್ಧಾಂಜಲಿಯು ಈ ದಂತಕಥೆಗಳ ಸಾಧನೆ, ಚಲನಚಿತ್ರೋದ್ಯಮದ ಮೇಲಿನ ಪ್ರಭಾವ, ನಿರಂತರ ಪರಂಪರೆಯನ್ನು ಒತ್ತಿ ಹೇಳಿತು.
ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಮತ್ತು ನಟ ಕೃಷ್ಣಂ ರಾಜು ಅವರನ್ನು ಒಳಗೊಂಡ ಸಿನಿಮಾದ ಸ್ಲೈಡ್ ಒಂದನ್ನು ಶೇರ್ ಮಾಡಿದ್ದಾರೆ. "ಲೆಜೆಂಡ್ಸ್ ಲೈವ್ ಫಾರೆವರ್" ಎಂಬ ಕ್ಯಾಪ್ಷನ್ ಅನ್ನು ಈ ಸ್ಲೈಡ್ನಲ್ಲಿ ಕಾಣಬಹುದು. ಇದು, ಭಾರತೀಯ ಸಿನಿಮಾ ಮತ್ತು ವಿಶೇಷವಾಗಿ ದಕ್ಷಿಣ ಚಿತ್ರರಂಗ ಮತ್ತು ಮಾಧ್ಯಮಗಳನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರಗಳನ್ನು ಎತ್ತಿ ತೋರಿಸುತ್ತದೆ.