'ಜೊತೆ ಜೊತೆಯಲಿ' ಜನಪ್ರಿಯತೆಯ ನಟಿ ಮೇಘಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಮೂರು ಹೊಸ ಸಿನಿಮಾಗಳ ಅಪ್ಡೇಟ್ಸ್ ನೀಡಿದ್ದಾರೆ. ಭಾನುವಾರ ಇವರು 26ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಖುಷಿಯದಲ್ಲಿದ್ದ ನಟಿಗೆ ಕುಟುಂಬ, ಚಿತ್ರರಂಗ ಸೇರಿದಂತೆ ಅಭಿಮಾನಿ ಬಳಗ ಶುಭಾಶಯಗಳ ಸುರಿಮಳೆಗೈದಿದೆ.
ಮುಂದಿನ ಚಿತ್ರಗಳ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ನಟಿಗೆ ವಿಶೇಷವಾಗಿ ಶುಭ ಕೋರಿದೆ. ಆಫ್ಟರ್ ಆಪರೇಶನ್ ಲಂಡನ್ ಕೆಫೆ, ಗ್ರಾಮಾಯಣ ಮತ್ತು ಚೀತಾ ನಟಿಯ ಮುಂಬರುವ ಚಿತ್ರಗಳಾಗಿವೆ.
'ಆಫ್ಟರ್ ಆಪರೇಶನ್ ಲಂಡನ್ ಕೆಫೆ': ಪೋಸ್ಟರ್ಗಳ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿರುವ 'ಆಫ್ಟರ್ ಆಪರೇಶನ್ ಲಂಡನ್ ಕೆಫೆ' ಟೀಸರ್ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಆಕರ್ಷಕ ಪೋಸ್ಟರ್ ಜೊತೆಗೆ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ ಬಹಿರಂಗಪಡಿಸಿದ್ದಾರೆ. ಈ ಅನೌನ್ಸ್ಮೆಂಟ್ ಪೋಸ್ಟರ್ ಅನ್ನು ಕರಾವಳಿ ಬೆಡಗಿ ಮೇಘಾ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಂಗ, ದಾವಣಿ ತೊಟ್ಟು ಹಳ್ಳಿ ಹುಡುಗಿಯಾಗಿ ನೋಟ ಬೀರಿದ್ದಾರೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿಬರಲಿದೆ. ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ದೇಶಕ ಸಡಗರ ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.