ಬಾಲಿವುಡ್ ನಟಿ ಆಲಿಯಾ ಭಟ್ ಯಶಸ್ವಿ ವೃತ್ತಿಜೀವನ ಮನ್ನಡೆಸುತ್ತಿದ್ದಾರೆ. ಕಮರ್ಷಿಯಲ್ ಹಿಟ್, ವಿಮರ್ಶಕರ ಮೆಚ್ಚುಗೆಗಳೆರಡರಲ್ಲೂ ಸತತವಾಗಿ ಯಶಸ್ಸು ಕಾಣುತ್ತಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಮತ್ತು ಡಾರ್ಲಿಂಗ್ಸ್ ನಂತಹ ಸಿನಿಮಾ ಪಾತ್ರಗಳಿಂದ ಹಿಡಿದು ಬ್ರಹ್ಮಾಸ್ತ್ರ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯವರೆಗೆ ಯಶಸ್ಸನ್ನೇ ಕಂಡಿದ್ದಾರೆ. ಅಲ್ಲದೇ ಹಾರ್ಟ್ ಆಫ್ ಸ್ಟೋನ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಆಲಿಯಾ ಭಟ್ ಅವರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ನಟಿ, ನಿರ್ಮಾಪಕಿ, ಉದ್ಯಮಿ, ಬ್ರ್ಯಾಂಡ್ಗಳ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಬ್ಯುಸಿ ಶೆಡ್ಯೂಲ್ ನಡುವೆಯೂ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಪುತ್ರಿ ರಾಹಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಇದೀಗ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಜಿಗ್ರಾ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ವೇದಾಂಗ್ ರೈನಾ ಸಹ ಅಭಿನಯಿಸುತ್ತಿದ್ದಾರೆ.
ಗುರುವಾರದಂದು ನಟಿ ಆಲಿಯಾ ಭಟ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ವೇದಾಂಗ್ ರೈನಾ ಜೊತೆಗಿನ ಕ್ಯಾಂಡಿಡ್ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಚಿತ್ರೀಕರಣ ಪೂರ್ಣಗೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇವು ಕ್ಯಾಂಡಿಡ್ ಫೋಟೋಗಳಾಗಿವೆ. ಮುಸ್ಸಂಜೆಯಲ್ಲಿ ಕ್ಲಿಕ್ಕಿಸಿರುವ ಫೋಟೋಗಳು ಇದಾಗಿದ್ದು, ನದಿ ಬಳಿ ನಗು ಹಂಚಿಕೊಂಡಿದ್ದಾರೆ. ಉತ್ತಮ ಕ್ಷಣಗಳನ್ನು ಕಳೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಒಂದು ಫೋಟೋದಲ್ಲಿ, ವೇದಾಂಗ್ ರೈನಾ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದು ತಮಾಷೆಯ ಕ್ಷಣಗಳನ್ನು ಕಳೆದಿರುವುದು ಸ್ಪಷ್ಟವಾಗಿದೆ. ಫೋಟೋಗಳನ್ನು ಹಂಚಿಕೊಂಡ ಆಲಿಯಾ, "ಜಿಗ್ರಾ ಓಹ್... ಅಬ್ಕಿ ತೇರಿ ಬಾರಿ ಹೋ ವೇದಾಗ್ ರೈನಾ. ಜಿಗ್ರಾ ಶೂಟಿಂಗ್ ಕಂಪ್ಲೀಟ್. ಸೆಪ್ಟೆಂಬರ್ 27ರಂದು ಸಿನಿಮಾ ತೆರೆಕಾಣಲಿದೆ'' ಎಂದು ಬರೆದುಕೊಂಡಿದ್ದಾರ.