2023ರಲ್ಲಿ ಬಿಡುಗಡೆಯಾದ 'ಜವಾನ್' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿತ್ತು. ದಕ್ಷಿಣ ಚಿತ್ರರಂಗದ ಹೆಸರಾಂತ ನಿರ್ದೇಶಕ ಅಟ್ಲೀ ಹಾಗೂ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡಿರುವ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಕಾಂಬೋದಲ್ಲಿ ಬಂದ ಈ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಜವಾನ್ ಮೂಲಕ ಅಟ್ಲೀ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಆ್ಯಕ್ಷನ್ ಥ್ರಿಲ್ಲರ್ನೊಂದಿಗೆ ದಾಖಲೆಗಳನ್ನು ಪುಡಿಗಟ್ಟಿರುವ ಅಟ್ಲೀ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಚಿತ್ರದ ಮುಂದುವರಿದ ಕುರಿತು ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದರು.
ಕಳೆದ ವರ್ಷ ಸೆಪ್ಟೆಂಬರ್ 7ರಂದು ಚಿತ್ರಮಂದಿರ ಪ್ರವೇಶಿಸಿದ ಅರುಣ್ ಕುಮಾರ್ (ಅಟ್ಲೀ) ನಿರ್ದೇಶನದ ಜವಾನ್ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಜವಾನ್ ಮೂಲಕ ಅಟ್ಲೀ ಹಿಂದಿ ಪ್ರೇಕ್ಷರನ್ನೂ ಸೆಳೆದರು. ಶಾರುಖ್ ಖಾನ್ ಅವರ ಸ್ಟಾರ್ ಪವರ್ ಕೂಡಾ ಹೆಚ್ಚಿತು. ಚಿತ್ರದ ಕಥಾಹಂದರ, ಆ್ಯಕ್ಷನ್ ಸೀನ್ಸ್, ಹಾಡುಗಳು, ಪಾತ್ರವರ್ಗ ಎಲ್ಲವೂ ಗಲ್ಲಾಪೆಟ್ಟಿಗೆ ಯಶಸ್ಸಿಗೆ ಕಾರಣವಾಯ್ತು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅಟ್ಲೀ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ತಮ್ಮ ಮುಂಬರುವ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು.
ಜವಾನ್ 2ನಲ್ಲಿ ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆ ಎದುರಾದಾಗ, "ಅದರ ಬಗ್ಗೆ ಖಚಿತತೆ ಇಲ್ಲ. ಆದರೆ ನಿಮಗೆ ಸರ್ಪ್ರೈಸ್ ಎನಿಸುವಂಥದ್ದನ್ನು ಬರೆಯುತ್ತೇನೆ. ಪ್ರತೀ ಚಿತ್ರ, ಸೀಕ್ವೆಲ್ ಆಗುವ ಅವಕಾಶ ಹೊಂದಿರುತ್ತದೆ. ಆದರೆ ನಾನು ಯಾವಾಗಲೂ ಹೊಸ ಮತ್ತು ಅನಿರೀಕ್ಷಿತ ಕಂಟೆಂಟ್ನಿಂದ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತೇನೆ. ನಿಮಗೆ ಏನನ್ನಾದರೂ ತಂದೇ ತರುತ್ತೇನೆ, ನೋಡೋಣ" ಎಂದು ಉತ್ತರಿಸಿದರು.