ಹಿರಿಯ ಗೀತರಚನೆಕಾರ, ಖ್ಯಾತ ಚಿತ್ರಕಥೆಗಾರ ಜಾವೇದ್ ಅಖ್ತರ್ ಇತ್ತೀಚೆಗೆ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಸಿನಿಮಾ ಬಗ್ಗೆ ಮಾತನಾಡಿದ್ದರು. ತಮ್ಮ ಟೀಕೆಗಳಿಗೆ ಕಾಮೆಂಟ್ ಮಾಡಿರುವ ವಂಗಾ ಅವರನ್ನುದ್ದೇಶಿಸಿ ಇದೀಗ ಹಿರಿಯ ಗೀತರಚನೆಕಾರ ಮಾತನಾಡಿದ್ದಾರೆ. ಸಂದೀಪ್ ಅವರನ್ನು ಟೀಕಿಸುತ್ತಿಲ್ಲ, ಆದರೆ ಪ್ರೇಕ್ಷಕರು ಅಂಥ ಚಿತ್ರಗಳಿಗೆ ಹೇಗೆ ಒಲವು ತೋರುತ್ತಿದ್ದಾರೆ ಎಂಬುದರ ಬಗ್ಗೆ ಕಾಳಜಿ ವಹಿಸಿದ್ದಾಗಿ ಅಖ್ತರ್ ಸ್ಪಷ್ಟಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿರುವುದಾಗಿ ವಿವರಿಸಿದ ಅಖ್ತರ್, ಲಕ್ಷಾಂತರ ವೀಕ್ಷಕರ ಮೇಲೆ ಸಿನಿಮಾ ಪರಿಣಾಮ ಬೀರುವ ಬಗ್ಗೆ ಚಿಂತಿಸುತ್ತಿರುವುದಾಗಿ ತಿಳಿಸಿದರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾವೇದ್ ಅಖ್ತರ್ ಅವರಲ್ಲಿ ಅನಿಮಲ್ ಸಿನಿಮಾ ಬಗ್ಗೆ ಮತ್ತು ಅವರ ಈ ಹಿಂದಿನ ಟೀಕೆಗೆ ನಿರ್ದೇಶಕ ಸಂದೀಪ್ ಅವರ ಪ್ರತಿಕ್ರಿಯೆ ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಖ್ತರ್, "ನಾನು ನಿರ್ದೇಶಕರನ್ನು ಟೀಕಿಸಲಿಲ್ಲ. ಪ್ರಜಾಪ್ರಭುತ್ವ ಸಮಾಜದಲ್ಲಿ ಅವರಿಗೆ ಒಂದು 'ಅನಿಮಲ್' (ಸಿನಿಮಾ), ಅನೇಕ ಅನಿಮಲ್ಗಳನ್ನು ಮಾಡುವ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ. "ನನಗೆ ಪ್ರೇಕ್ಷಕರ ಬಗ್ಗೆ ಕಾಳಜಿ ಇತ್ತೇ ಹೊರತು ನಿರ್ದೇಶಕರನ್ನು ಟೀಕಿಸಲಿಲ್ಲ" ಎಂದು ಹೇಳಿದರು. ವಿವಾದಾತ್ಮಕ ಪಾತ್ರಗಳ ಚಿತ್ರಣಕ್ಕೆ ಸಂಬಂಧಿಸಿದಂತೆ, ''ಯಾವುದೇ ಸಿನಿಮಾ ಮಾಡುವ ಹಕ್ಕು ಅವರಿಗಿದೆ'' ಎಂದರು. ಸಂದರ್ಶನದಲ್ಲಿ ಜಾವೇದ್ ಅಖ್ತರ್, ಸಿನಿಮಾಗಳು ವೀಕ್ಷಕರ ಮೇಲೆ ಬೀರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ನನ್ನ ಕಾಳಜಿ ಆ ಸಿನಿಮಾವನ್ನು ಎಂಜಾಯ್ ಮಾಡಿದ ಕೋಟಿಗಟ್ಟಲೆ ಜನರ ಮೇಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಅಪ್ಪು ನಿರ್ವಹಿಸಿದ ಪಾತ್ರಗಳೆಲ್ಲವೂ ವಿಭಿನ್ನ: ತೆರೆ ಮೇಲೆ ನಕ್ಷತ್ರದಂತೆ ಮಿಂಚಿ ಮರೆಯಾದ ನಟ