ಸುಕೃತಾ ವಾಗ್ಲೆ. ಈ ಹೆಸರು ಕೇಳುತ್ತಿದ್ದಂತೆ ಎಲ್ಲರ ಕಣ್ಮುಂದೆ ಬರೋದು 'ಜಟ್ಟ' ಸಿನಿಮಾ. ಮೊದಲ ಚಿತ್ರದಲ್ಲೇ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಕನ್ನಡ ಸಿನಿಪ್ರೇಮಿಗಳ ಮನಸ್ಸು ಕದ್ದಾಕೆ. ಮೇಘ ಅಲಿಯಾಸ್ ಮ್ಯಾಗಿ ಸಿನಿಮಾದಲ್ಲಿ ಟಾಮ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ವಾಗ್ಲೆ, ಬಹಳ ಗ್ಯಾಪ್ನ ನಂತರ ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆಯೊಂದಿಗೆ ಪ್ರೇಕ್ಷರೆದುರು ಬರುತ್ತಿದ್ದಾರೆ. 'ಕಪಟಿ' ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.
ಸದ್ಯ ಟೀಸರ್ ರಿಲೀಸ್ ಆಗಿದ್ದು ಭರವಸೆ ಮೂಡಿಸಿದೆ. ಟೀಸರ್ನಲ್ಲಿ ಸುಕೃತಾ ವಾಗ್ಲೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕತ್ತಲೆ ಪ್ರಪಂಚದ ಕಥೆಯನ್ನು ಇದು ಒಳಗೊಂಡಿದೆ.
ಈ ಬಗ್ಗೆ ಮಾತನಾಡಿರುವ ಸುಕೃತಾ, "ಎಲ್.ಎಲ್.ಬಿ ಮಾಡುತ್ತಿದ್ದೇನೆ. ಹಾಗಾಗಿ, ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದೆ. ಕಪಟಿ ಚಿತ್ರದ ಕಥೆಯನ್ನು ನಿರ್ದೇಶಕರಾದ ರವಿಕಿರಣ್ ನನಗೆ ಹೇಳಿದಾಗ ಅಭಿನಯಿಸುವುದಿಲ್ಲ ಎನ್ನಲು ಆಗಲಿಲ್ಲ. ಹಾರರ್ ಕಥೆಯ ಮಹಿಳಾ ಪ್ರಧಾನ ಚಿತ್ರವಿದು. ಮತ್ತೆ ಇಂಡಸ್ಟ್ರಿಗೆ ಬರಲು ಚಿತ್ರದ ಸ್ಕ್ರಿಪ್ಟ್ ಕಾರಣ. ಈ ಸಿನಿಮಾ ನಿಜಕ್ಕೂ ನನಗೆ ಒಳ್ಳೆಯ ಹೆಸರು ತಂದು ಕೊಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಮೊದಲ ಬಾರಿಗೆ ಹೊಸ ಪ್ರತಿಭೆಗಳಿಗೆ ನಿರ್ದೇಶನದ ಹೊಣೆ ನೀಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಒಂಭತ್ತನೆ ದಿಕ್ಕು ಚಿತ್ರ ಆದ್ಮೇಲೆ ನಿರ್ದೇಶಕ ದಯಾಳ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.