ಸ್ಯಾಂಡಲ್ವುಡ್ನಲ್ಲೀಗ ಸ್ಟಾರ್ ನಟರಿಂದ ಹಿಡಿದು ಹೊಸ ಪ್ರತಿಭೆಗಳ ಸಿನಿಮಾಗಳ ಪರ್ವ ಶುರುವಾಗಿದೆ. ಈ ಸಾಲಿನಲ್ಲಿ ಸ್ಟೈಲಿಷ್ ಡೈರೆಕ್ಟರ್ ಎಂದೇ ಜನಪ್ರಿಯರಾಗಿರುವ ಇಂದ್ರಜಿತ್ ಲಂಕೇಶ್ ಅವರು 'ಗೌರಿ' ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೇಕಿಂಗ್, ಹಾಡುಗಳಿಂದಲೇ ಸಖತ್ ಟಾಕ್ ಆಗುತ್ತಿರುವ ಗೌರಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ಸಿಕ್ಕಿದೆ.
ಹೌದು, ಗೌರಿ ಚಿತ್ರದ ಟ್ರೇಲರ್ ಅನ್ನು ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ಅನಾವರಣಗೊಳಿಸಿದ್ದಾರೆ. ಕಳೆದ ದಿನ ಎಂ.ಜಿ ರಸ್ತೆಯ ಮಾಲ್ ಒಂದರಲ್ಲಿ ಈ ಟ್ರೇಲರ್ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಸುದೀಪ್ ಜೊತೆಗೆ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ನಿರ್ಮಾಪಕ ಎಂ ರಮೇಶ್ ರೆಡ್ಡಿ ಉಪಸ್ಥಿತರಿದ್ದರು. ಈವೆಂಟ್ನಲ್ಲಿ ಸುದೀಪ್ ವ್ಯಕ್ತಿತ್ವದ ಬಗ್ಗೆ ಇಂದ್ರಜಿತ್ ಲಂಕೇಶ್ ಗುಣಗಾನ ಮಾಡಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೊಸಬರ ಸಿನಿಮಾಗಳಿಗೆ ಸಪೋರ್ಟ್:ಟ್ರೇಲರ್ ರಿಲೀಸ್ ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಕಿಚ್ಚ ಸುದೀಪ್ ತಮ್ಮ ಬೆಳವಣಿಗೆ ಜೊತೆಗೆ ಹೊಸಬರ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಒಳ್ಳೆ ಗುಣ ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ನನ್ನ ಸಿನಿಮಾಗಳು. ನಾನು 'ತುಂಟಾಟ' ಸಿನಿಮಾ ಮಾಡುವ ಸಂದರ್ಭ 'ಹುಚ್ಚ' ಚಿತ್ರ 25 ವಾರಗಳನ್ನು ಪೂರೈಸಿ ಸುದೀಪ್ ಬಹಳ ಬ್ಯುಸಿಯಾಗಿದ್ದರು. ಅಂಥ ಸಂದರ್ಭವೂ ಸುದೀಪ್ ನನ್ನ ತುಂಟಾಟ ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದರು. ಸಿನಿಮಾ ಯಶ ಕಂಡಿತ್ತು. ಕೃತಘ್ಞತಾ ಭಾವದಿಂದ ಏನಾದರು ಮಾಡಬೇಕೆಂದು ಅನ್ನಿಸಿತ್ತು.
ಆಗ ಸುದೀಪ್ ಮಗಳು ಬಹಳ ಚಿಕ್ಕವರು. ಅವರಿಗೆ ನಾನು ಒಂದು ಡೈಮಂಡ್ ನೆಕ್ಲೇಸ್ ಕೊಡಲು ಹೋಗಿದ್ದೆ. ಆಗ ಸುದೀಪ್ ಅವರು ಅದನ್ನು ಬೇಡ ಎಂದು ಹೇಳಿದ್ದರು. ಇಲ್ಲ ನೀವು ಈ ಉಡುಗೊರೆ ಸ್ವೀಕರಿಸಬೇಕು ಎಂದು ತಿಳಿಸಿದಾಗ, ನನಗೆ ಬೈಗುಳವೂ ಸಿಕ್ಕಿತ್ತು. ಅಂಥಾ ಒಳ್ಳೆಯ ಗೆಳೆಯ ಅವರು.
ಅವರಿಗೀಗ ಏನಾದರೂ ಗಿಫ್ಟ್ ಕೊಡಬೇಕು ಅಂತಾ ಅನಿಸಿತು. ಅವರ ಬಳಿ ಎಲ್ಲವೂ ಇದೆ. ಹಾಗಾಗಿ ವಿದೇಶದಿಂದ ಗ್ರೀಕ್ ಓಕ್ಸ್ ಕಂಪನಿಯ ಕ್ರಿಕೆಟ್ ಬ್ಯಾಟ್ ತರಿಸಿದ್ದೇನೆ. ಕ್ರಿಕೆಟ್ ಅನ್ನೋದು ಶುರುವಾಗಿದ್ದು ಇಂಗ್ಲೆಂಡ್ನಲ್ಲಿ. ಹಾಗಾಗಿ ವಿದೇಶದಿಂದ ಈ ಉಡುಗೊರೆ ತರಿಸಿದ್ದೇನೆ. ಈ ಬ್ಯಾಟ್ನಲ್ಲಿ ಸುದೀಪ್ ಮುಂದಿನ ಕ್ರಿಕೆಟ್ ಮ್ಯಾಚ್ಗಳನ್ನು ಆಡಲಿ ಅನ್ನೋದು ನನ್ನ ಒಂದು ಆಸೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.