ಕನ್ನಡ ಚಿತ್ರರಂಗದಲ್ಲಿ ಲಕ್ಷ್ಮಣ ಹಾಗೂ ಪಂಟ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಅನೂಪ್ ರೇವಣ್ಣ. ಬಹಳ ದಿನಗಳ ಬಳಿಕ ಕ್ಯಾಚೀ ಟೈಟಲ್ ಹೊಂದಿರುವ 'ಹೈಡ್ ಅಂಡ್ ಸೀಕ್' ಎಂಬ ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದ್ದಾರೆ. ಅನೂಪ್ ರೇವಣ್ಣ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿದ್ದು, ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಹೈಡ್ ಅಂಡ್ ಸೀಕ್ ಚಿತ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಸಾಥ್ ಸಿಕ್ಕಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅನ್ನು ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ವಿ.ಪ ಸದಸ್ಯ ಎಸ್. ವಿಶ್ವನಾಥ್ ಹಾಗೂ ರೇವಣ್ಣ ಅವರ ಅನೇಕ ಸ್ನೇಹಿತರು ಹಾಜರಿದ್ದು, ಶುಭ ಹಾರೈಸಿದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರೇವಣ್ಣ ಅವರ ಮಗ ನಾಯಕನಾಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ. ಇದು ಅವರ ನಾಲ್ಕನೇ ಚಿತ್ರ. ಟ್ರೇಲರ್ನಲ್ಲಿ ಅವರ ಅಭಿನಯ ಬಹಳ ಚೆನ್ನಾಗಿದೆ. ಚಿತ್ರವೂ ಸಹ ಚೆನ್ನಾಗಿರುತ್ತದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಸಿಗಲಿ ಎಂದು ಶುಭಹಾರೈಸಿದರು.
ಎಸ್. ವಿಶ್ವನಾಥ್ ಮಾತನಾಡಿ, ಈ ಚಿತ್ರದಲ್ಲಿ ನಮ್ಮ ಹುಡುಗನೇ ಹೀರೋ ಆಗಿದ್ದಾನೆ. ರಾಜ್ಕುಮಾರ್ ಅವರ ಮೊಮ್ಮಗಳು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎಲ್ಲರ ಮನಗೆಲ್ಲಲಿ ಎಂದು ಶುಭ ಕೋರಿದರು. ಸೀನಿಯರ್ ಪ್ರೊಫೆಸರ್ ಡಿ.ಕೆ ರವಿ ಮಾತನಾಡಿ, ಟ್ರೇಲರ್ ಬಹಳ ಇಂಪ್ರೆಸಿವ್ ಆಗಿದೆ. ಅನೂಪ್ ಒಳ್ಳೇ ಹುಡುಗ. ಆತನಿಗೆ ಉತ್ತಮ ಭವಿಷ್ಯವಿದೆ. ನಾಯಕಿ ರಾಜ್ಕುಮಾರ್ ಅವರ ಮೊಮ್ಮಗಳು. ಎಲ್ಲರೂ ಚಿತ್ರ ನೋಡಿ ಹರಸಿ ಎಂದು ತಿಳಿಸಿದರು.
ನಂತರ ಮಾಜಿ ಸಚಿವ ರೇವಣ್ಣ ಮಾತನಾಡಿ, ಚಿತ್ರರಂಗ ಇಂದು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು. ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್ನಲ್ಲಿ ಹೋಗಿದ್ದೆ. ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೆನ್ ರಾಮ್ ಕುಮಾರ್ ಮಾತನಾಡಿ, ಹೈಡ್ ಅಂಡ್ ಸೀಕ್ ಮಾ.15ಕ್ಕೆ ತೆರೆಕಾಣುತ್ತಿದೆ. ನನ್ನ ತಂಗಿ ಧನ್ಯಾ ಹಾಗೂ ಅನೂಪ್ ಅವರ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ, ನನ್ನ ಪಾತ್ರದ ಹೆಸರು ಹಾಸಿನಿ. ಒಂದೊಳ್ಳೆ ಕುಟುಂಬದಿಂದ ಬಂದ ಹುಡುಗಿ. ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥದ್ದು? ಆ ಕಿಡ್ನಾಪರ್ಸ್ ಉದ್ದೇಶ, ಹಿನ್ನೆಲೆ ಏನು? ಅನ್ನೋದರ ಮೇಲೆ ಈ ಸಿನಿಮಾ ಸಾಗುತ್ತದೆ ಎಂದು ತಿಳಿಸಿದರು.