ಕನ್ನಡ ಚಿತ್ರರಂಗದಲ್ಲಿ ವಿನೂತನ ಹಾಗೂ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಿರ್ದೇಶಕ ಹೇಮಂತ್ ಎಂ ರಾವ್. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಕವಲುದಾರಿ, ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಒನ್ ಮತ್ತು ಸೈಡ್ ಬಿ ಸಿನಿಮಾಗಳ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಹೇಮಂತ್ ರಾವ್ ಅವರು ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ. ಅದಾಗ್ಯೂ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗಿದೆ.
ಹೌದು, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಹೇಮಂತ್ ರಾವ್, ಸದ್ಯಕ್ಕೆ ಲವ್ ಸ್ಟೋರಿ ಸಿನಿಮಾ ಮಾಡಲಾರೆ ಎಂದಿದ್ದಾರೆ. ಜೊತೆಗೆ ಸೈನ್ಸ್ ಫಿಕ್ಷನ್ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ.
ಸೈನ್ಸ್ ಫಿಕ್ಷನ್ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ ಬೆನ್ನಲ್ಲೇ, ಡಾ. ಶಿವರಾಜ್ಕುಮಾರ್ ಈ ಚಿತ್ರದ ನಾಯಕನಾಗಲಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಗುಸುಗುಸು ನಿಜವಾದ್ರೆ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಸುದ್ದಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ.
ಸದ್ಯ ಈ ಸುದ್ದಿ ಒಂದು ಊಹೆ ಅಷ್ಟೇ. ಈ ಮಾತು ನಿಜವಾದ್ರೆ ಶಿವರಾಜ್ಕುಮಾರ್ ಸಿನಿಮಾ ನಿರ್ದೇಶಿಸುವ ಅದೃಷ್ಟ ಹೇಮಂತ್ ರಾವ್ ಪಾಲಾಗಲಿದೆ. ಆದರೆ ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಎರಡು ಅಥವಾ ಮೂರು ವರ್ಷ ಆಗಬಹುದು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಸದ್ಯ ಅತ್ಯಂತ ಬ್ಯುಸಿ ಇರುವ ನಟ ಅಂದ್ರೆ ಶಿವರಾಜ್ಕುಮಾರ್. ಹ್ಯಾಟ್ರಿಕ್ ಹೀರೋ ಆಪ್ತರು ಹೇಳುವ ಹಾಗೇ, ಕನ್ನಡ ಸೇರಿದಂತೆ ಬರೋಬ್ಬರಿ 12ಕ್ಕೂ ಹೆಚ್ಚು ಚಿತ್ರಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ. ಆ ಪೈಕಿ ಕರಟಕ ದಮನಕ ಬಿಡುಗಡೆಗೆ ಸಜ್ಜಾಗಿದೆ.