ಸ್ಯಾಂಡಲ್ವುಡ್ನ ಸ್ಟೈಲಿಷ್ ಡೈರೆಕ್ಟರ್ ಆಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್. ಸದ್ಯ ಪುತ್ರ ಸಮರ್ಜಿತ್ ಲಂಕೇಶ್ ಅವರನ್ನು 'ಗೌರಿ' ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಗೌರಿ ಚಿತ್ರ ಬಿಡುಗಡೆ ರೆಡಿಯಾಗಿದೆ. ಜೊತೆಗೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ, ಧ್ಯಾನ್ ಹಾಗೂ ಸದಾ ನಟನೆಯ ಸೂಪರ್ ಹಿಟ್ 'ಮೊನಾಲಿಸಾ' ಚಿತ್ರ 20 ವರ್ಷಗಳ ಸಂಭ್ರಮದಲ್ಲಿದೆ. ಈ ಹಿನ್ನೆಲೆ ಇಂದ್ರಜಿತ್ ಲಂಕೇಶ್ ಚಿತ್ರತಂಡದ ಜೊತೆ ಸೇರಿ ಕೇಕ್ ಕಟ್ ಮಾಡುವ ಮೂಲಕ ಮೊನಾಲಿಸಾ ಚಿತ್ರದ ಇಪ್ಪತ್ತರ ಸಂಭ್ರಮ ಆಚರಿಸಲಾಯಿತು.
ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ಧ್ಯಾನ್, ನಾಯಕಿ ಸದಾ, ನಟ ಶರಣ್, ಸಂಭಾಷಣೆ ಬರೆದಿದ್ದ ಬಿ.ಎ.ಮಧು, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಡಿಸೈನರ್ ಮಣಿ ಸೇರಿದಂತೆ ಮೊನಾಲಿಸಾ ಚಿತ್ರತಂಡ ಸಮಾರಂಭದಲ್ಲಿ ಉಪಸ್ಥಿತವಿತ್ತು.
ಈ ಸಂಭ್ರಮದ ಸಂದರ್ಭ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹೊಸ ಚಿತ್ರ 'ಗೌರಿ'ಯ ಎರಡು ಹಾಡುಗಳು ಬಿಡುಗಡೆಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಗೌರಿ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಿದರು. ಇಂದಿರಾ ಲಂಕೇಶ್ ಅವರು ಉಪಸ್ಥಿತರಿದ್ದರು. ಈ ಹಾಡನ್ನು ಇಂದ್ರಜಿತ್ ಅವರ ಸಹೋದರಿ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಮತ್ತೊಂದು 'ಮುದ್ದಾದ' ಶೀರ್ಷಿಕೆಯ ಹಾಡನ್ನು ಮೊನಾಲಿಸಾ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ ಗೌರಿ ಚಿತ್ರದ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಸೇರಿ ಬಿಡುಗಡೆ ಮಾಡಿದರು. ಗೌರಿ ಹಾಡನ್ನು ಕೆ.ಕಲ್ಯಾಣ್ ಹಾಗೂ ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿದೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ ಅವರು, ಸಂಗೀತ ಎಂದರೆ ಸಿನಿಮಾ. ಸಿನಿಮಾ ಎಂದರೆ ಸಂಗೀತ. ಸಂಗೀತವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲು ಅಸಾಧ್ಯ. ಸ್ಟೈಲಿಶ್ ಚಿತ್ರಗಳಿಗೆ ಹೆಸರಾದ ಇಂದ್ರಜಿತ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದಲ್ಲೇ ಮಗನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಇಂದು ನನ್ನಿಂದ ಬಿಡುಗಡೆಯಾದ ಹಾಡನ್ನು ಗೌರಿ ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. ಗೌರಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.