ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜಾ ಭಾರತೀಯ ಚಿತ್ರರಂಗದ ತಾರಾ ದಂಪತಿ. ಅದೆಷ್ಟೋ ಯುವ ಮನಸ್ಸುಗಳಿಗೆ ಮಾದರಿ ಈ ದಂಪತಿ. ಪ್ರೀತಿ ಅಂದ್ರೆ ಹೀಗಿರಬೇಕು, ಈ ಜೋಡಿ ನೋಡಿ ಕಲಿಯಬೇಕು ಅಂದವರೆಷ್ಟೋ. ರಿತೇಶ್-ಜೆನಿಲಿಯಾ ಪ್ರೇಮ್ಕಹಾನಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಆರಂಭದ ದಿನಗಳಲ್ಲಿ ನಟಿ ಜೆನಿಲಿಯಾ ಡಿಸೋಜಾ ತೆಲುಗು, ತಮಿಳು ಸೇರಿ ದಕ್ಷಿಣ ಚಿತ್ರರಂಗದಲ್ಲಿ ಸರಣಿ ಆಫರ್‌ಗಳನ್ನು ಗಿಟ್ಟಿಸಿಕೊಂಡರು. ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ನಿಧಾನವಾಗಿ ಬಿಟೌನ್ಗೆ ಶಿಫ್ಟ್ ಆಗಿ ಅಲ್ಲಿನ ಪ್ರೇಕ್ಷಕರನ್ನೂ ರಂಜಿಸುವಲ್ಲಿ ಯಶಸ್ಸು ಕಂಡರು. ಅಲ್ಲಿ ಪರಿಚಯವಾದ ಬಾಲಿವುಡ್ ಸ್ಟಾರ್ ರಿತೇಶ್ ದೇಶ್ಮುಖ್ ಅವರನ್ನು ಮದುವೆಯಾದರು. ಸದ್ಯ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.
ಜೆನಿಲಿಯಾ, ರಿತೇಶ್ ಒಂದೇ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯವಾದರು. 2003ರಲ್ಲಿ ತೆರೆಕಂಡ 'ತುಜೆ ಮೇರಿ ಕಸಮ್' ಜೆನಿಲಿಯಾ, ರಿತೇಶ್ ಕಾಂಬೋದ ಚೊಚ್ಚಲ ಚಿತ್ರ. ಶೂಟಿಂಗ್ ಸೆಟ್ನಲ್ಲಿ ಮೊದಲ ಬಾರಿ ಭೇಟಿಯಾದ ಇವರು ಆರಂಭದ ದಿನಗಳಲ್ಲಿ ಕೊಂಚ ದೂರವೇ ಇದ್ದರು. ಚಿತ್ರೀಕರಣದ ಆರಂಭದಲ್ಲಿ ಪರಸ್ಪರ ಹೆಚ್ಚು ಮಾತನಾಡದ ಈ ಜೋಡಿ, ಚಿತ್ರ ಮುಗಿದ ನಂತರ ಉತ್ತಮ ಸ್ನೇಹಿತರಾದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ರಿತೇಶ್ ಅತ್ಯಂತ ಭರವಸೆಯ ನಟ (ಚೊಚ್ಚಲ) ಪ್ರಶಸ್ತಿಗೆ ನಾಮನಿರ್ದೇಶನಗೊಂಡರೆ, ಜೆನಿಲಿಯಾ ಕೂಡ ಅತ್ಯಂತ ಭರವಸೆಯ ನಟಿ (ಚೊಚ್ಚಲ) ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು.
ಮೊದಲ ಸಿನಿಮಾದ ನಂತರ ಈ ಸ್ನೇಹ ಮುಂದುವರೆಯಿತು. 2004ರಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಕಾಮಿಡಿ ಸಿನಿಮಾ ತೆರೆಕಂಡು ಹಿಟ್ ಆಯಿತು. ಆ ನಂತರ ಇಬ್ಬರೂ ವೃತ್ತಿಯತ್ತ ಗಮನ ಹರಿಸಿದರು. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ನಮ್ಮ ಪ್ರೀತಿಯ ಆರಂಭದ ದಿನಗಳಲ್ಲಿ ವಿಡಿಯೋ ಕರೆಗಳು, ಸಾಮಾನ್ಯ ಕರೆಗಳು ಮತ್ತು ಮೆಸೇಜ್ ಮಾಡುವುದು ಬಹಳ ದುಬಾರಿಯಾಗಿತ್ತು. ಅವರು ಚಿತ್ರೀಕರಣದ ಸಲುವಾಗಿ ದಕ್ಷಿಣ ಭಾರತದಲ್ಲಿ ಇದ್ದರು. ನಾನು ಯುಎಸ್ನಲ್ಲಿ ಶೂಟಿಂಗ್ನಲ್ಲಿದ್ದೆ. ಹಾಗಾಗಿ ನಮ್ಮ ಸಂವಹನವು ಹೆಚ್ಚಾಗಿ ಪತ್ರಗಳಲ್ಲೇ ನಡೆಯಿತು. ಪ್ರತಿದಿನ ನಾವು ಪತ್ರಗಳನ್ನು ಬರೆಯುತ್ತಿದ್ದೆವು. ಒಂದು ತಿಂಗಳ ನಂತರ ನಾವು ಭೇಟಿಯಾಗುತ್ತಿದ್ದೆವು. ಭೇಟಿ ಸಂದರ್ಭ ಆ 30 ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. 30 ದಿನಗಳಲ್ಲಿ ಏನಾಯಿತು ಎಂಬುದು ಆ ಪತ್ರಗಳ ಮೂಲಕ ನಮಗೆ ತಿಳಿಯುತ್ತಿತ್ತು" ಎಂದು ವಿವರಿಸಿದರು.