ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ನಟ ಜಗ್ಗೇಶ್ ಮಲ್ಲೇಶ್ವರಂ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನನ್ವಯ, ನಾರಾಯಣಸ್ವಾಮಿ ಹಾಗೂ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಫೆಬ್ರುವರಿ 15ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಗ್ಗೇಶ್, ಹುಲಿ ಉಗುರಿನ ಪೆಂಡೆಂಟ್ ವಿವಾದದ ಕುರಿತು ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಗ್ರಾಮೀಣ ಭಾಷೆಯಲ್ಲಿ ತಾವು ಮಾತನಾಡಿರುವುದನ್ನ ತಪ್ಪಾಗಿ ಗ್ರಹಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾತಿ ನಿಂದನೆ, ಅವಾಚ್ಯ ಶಬ್ದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆಯೊಡ್ಡಲಾಗುತ್ತಿದೆ. ಹಾಗಾಗಿ ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಅದರನ್ವಯ ನಾರಾಯಣಸ್ವಾಮಿ ಎಂಬ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ''ಬಿಗ್ ಬಾಸ್ ಸೀಸನ್ 10'' ಇತ್ತೀಚೆಗಷ್ಟೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಾರ್ತಿಕ್ ಮಹೇಶ್ ವಿಜೇತರಾದರೆ, ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಫಿನಾಲೆ ತಲುಪಿದ ಆರು ಮಂದಿ ಪೈಕಿ, ವರ್ತೂರ್ ಸಂತೋಷ್ ಕೂಡ ಒಬ್ಬರು. ಆದ್ರೆ ಕಾರ್ಯಕ್ರಮ ಆರಂಭಗೊಂಡ ಕೆಲ ದಿನಗಳಲ್ಲಿ, ಮನೆಯಿಂದ ಹೊರನಡೆಯುವುದಾಗಿ ತಿಳಿಸಿದ್ದರು. ಅದಕ್ಕೆ ಕಾರಣವಾಗಿದ್ದೇ ಹುಲಿ ಉಗುರು ಪೆಂಡೆಂಟ್ ಪ್ರಕರಣ.