ಇಂದು ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆ ದೇಶಾದ್ಯಂತ ಅವರ ಸ್ಮರಣೆಯಾಗುತ್ತಿದೆ. 1630ರ ಫೆಬ್ರವರಿ 19ರಂದು ಜನಿಸಿದ ಈ ಧೈರ್ಯಶಾಲಿ ಯೋಧ ರಾಜನಿಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಸಲ್ಲುತ್ತದೆ. ಸ್ವರಾಜ್ಯ ಕನಸಿನೊಂದಿಗೆ, ದೇಶದ ಇತಿಹಾಸ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಭಾರತದ ಅತ್ಯಂತ ಗೌರವಾನ್ವಿತ ಐತಿಹಾಸಿಕ ವ್ಯಕ್ತಿಗಳ ಪೈಕಿ ಗುರುತಿಸಿಕೊಂಡಿರುವ ಶಿವಾಜಿ, ತನ್ನ ಸೇನಾ ತಂತ್ರಗಳಿಗೆ, ವಿಶೇಷವಾಗಿ ಗೆರಿಲ್ಲಾ ಯುದ್ಧ, ಮತ್ತು ನ್ಯಾಯ, ಧರ್ಮ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿ ಹೆಸರು ಮಾಡಿದ್ದಾರೆ. ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಅನೇಕ ಚಿತ್ರಗಳು ಈಗಾಗಲೇ ಮೂಡಿಬಂದಿವೆ. ಮುಂಬರುವ 'ಭಾರತದ ಹೆಮ್ಮೆ: ಛತ್ರಪತಿ ಶಿವಾಜಿ ಮಹಾರಾಜ' ಚಿತ್ರ ಕೂಡಾ ಸಖತ್ ಸದ್ದು ಮಾಡುತ್ತಿದೆ.
'ಭಾರತದ ಹೆಮ್ಮೆ : ಛತ್ರಪತಿ ಶಿವಾಜಿ ಮಹಾರಾಜ' (2027): ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆ ನಿರ್ದೇಶಕ ಸಂದೀಪ್ ಸಿಂಗ್ ಮರಾಠಾ ರಾಜನ ಪರಂಪರೆಯನ್ನು ಕೇಂದ್ರೀಕರಿಸುವ ಆಕರ್ಷಕ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ತಮ್ಮ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ, ಶಿವಾಜಿ ಮಹಾರಾಜರ ಶೌರ್ಯ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. 2027ರ ಜನವರಿ 21ರಂದು ಜಾಗತಿಕ ಮಟ್ಟದಲ್ಲಿ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಮಿ ಶಿವಾಜಿರಾಜೇ ಭೋಸಲೆ ಬೋಲ್ಟೊಯ್ (2009) : ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದ ಅತ್ಯಂತ ಜನಪ್ರಿಯ ಮರಾಠಿ ಚಲನಚಿತ್ರಗಳಲ್ಲಿ ಒಂದಾದ ಮಿ ಶಿವಾಜಿರಾಜೇ ಭೋಸಲೆ ಬೋಲ್ಟೊಯ್ ಮರಾಠಾ ರಾಜನ ತತ್ವಗಳಿಗೆ ಸಂದ ಗೌರವವಾಗಿದೆ. ಈ ಸಿನಿಮಾ ಆಧುನಿಕ ಭಾರತದ ವ್ಯವಹಾರಗಳ ಸ್ಥಿತಿಯಿಂದ ಹತಾಶೆಗೊಂಡ ಸಾಮಾನ್ಯ ವ್ಯಕ್ತಿ ದಿನಕರ್ ಭೋಸಲೆ (ಸಚಿನ್ ಖೇಡೇಕರ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ) ಸುತ್ತ ಸುತ್ತುತ್ತದೆ. ಅವರು ಶಿವಾಜಿ ಮಹಾರಾಜರ ಬೋಧನೆಯಿಂದ ಜಾಗೃತರಾಗುತ್ತಾರೆ. ಈ ಚಿತ್ರವು ಒಂದು ಸ್ಫೂರ್ತಿದಾಯಕ ಕಥಾಹಂದರವನ್ನೊಳಗೊಂಡಿದ್ದು, ಶಿವಾಜಿಯ ಆಳ್ವಿಕೆಯ ನ್ಯಾಯ, ಗೌರವ ಮತ್ತು ಧೈರ್ಯದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇಕ್ಷಕರನ್ನು ಒತ್ತಾಯಿಸುತ್ತದೆ.
ಛತ್ರಪತಿ ಶಿವಾಜಿ (1952) :ಈ ಹಿಂದಿ ಸಿನಿಮಾ ಮರಾಠಾ ರಾಜನ ಜನನದಿಂದ ಹಿಡಿದು ಪಟ್ಟಾಭಿಷೇಕ ಮತ್ತು ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸುವವರೆಗಿನ ಕಥೆಯನ್ನು ಒಳಗೊಂಡಿದೆ. ಕೆ.ಬಿ. ಲಾಲ್ ನಿರ್ದೇಶನದ ಈ ಚಿತ್ರದಲ್ಲಿ ಚಂದ್ರಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸೇನಾ ಕಾರ್ಯಾಚರಣೆಗಳು, ಸಾಮ್ರಾಜ್ಯದ ಸ್ಥಾಪನೆ ಮತ್ತು ಧರ್ಮವನ್ನು ಎತ್ತಿಹಿಡಿಯುವಲ್ಲಿ ಅವರ ಪ್ರಯತ್ನಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.