ಸ್ಯಾಂಡಲ್ವುಡ್ನ ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳ ಏಳಿಗೆ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಧುಮುಕಿದಾಗಲೇ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಬ್ಬ ನಡೆಯಲು ಸಾಧ್ಯ. ಆದರೆ ಅದ್ಯಾಕೋ? ಕನ್ನಡದ ಸ್ಟಾರ್‌ಗಳ ಸಿನಿಮಾಗಳು ನಿಧಾನಗತಿಯಲ್ಲಿ ಸಾಗಿದೆ.
ಸದ್ಯ ಚುನಾವಣೆಯ ಕಾವೇರಿದೆ. ಐಪಿಎಲ್ ಜ್ವರ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ, ಚಿತ್ರ ಯಾವುದಾದರೇನು? ಚಿತ್ರದಲ್ಲಿ ಯಾರಿದ್ದರೇನು? ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದಿಲ್ಲ ಎನ್ನುವ ವಾದ ಒಪ್ಪುವಂತಹದ್ದೇ. ಹಾಗಂತ ವರ್ಷಾನು ವರ್ಷ ಚಿತ್ರಗಳನ್ನು ಬಿಡುಗಡೆ ಮಾಡದೇ ಇದ್ದರೆ ಹೇಗೆ? ಚಿತ್ರಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕ ನಂತರವೂ, ಸಿನಿಪ್ರಿಯರ ಗಮನ ಆ ಚಿತ್ರದತ್ತ ಹೋದ ನಂತರವೂ ಆ ಚಿತ್ರವನ್ನು ಬಿಡುಗಡೆ ಮಾಡದೇ ಇದ್ರೆ ಹೇಗೆ?. ನಿಮಗೆ ಗೊತ್ತಿರಲಿ, ಕನ್ನಡದಲ್ಲಿ ಸ್ಟಾರ್ ಫ್ಲೇವರ್ ಸಿನಿಮಾಗಳು ಬಹುತೇಕ ಅಂತಿಮ ಘಟ್ಟ ತಲುಪಿದೆ. ಆದರೆ ಆ ಪೈಕಿ ಒಂದೇ ಒಂದು ಚಿತ್ರದ ಬಿಡುಗಡೆ ದಿನಾಂಕ ಇಲ್ಲಿವರೆಗೆ ಘೋಷಣೆಯಾಗಿಲ್ಲ.
ಉದಾಹರಣೆಗೆ 'ಭೀಮ' ಸಿನಿಮಾ. ಭೀಮ ಯಾವತ್ತೋ ಬರಬೇಕಿತ್ತು. ಸಲಗ ಚಿತ್ರದ ನಂತರ ದುನಿಯಾ ವಿಜಯ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಆರಂಭದಿಂದಲೇ ಸದ್ದು ಮಾಡಿಕೊಂಡು ಬಂದಿದ್ದ ಭೀಮ ಚಿತ್ರಕ್ಕೆ, ಎರಡು ಹಾಡು, ಟೀಸರ್ ಪ್ರೋತ್ಸಾಹ ತುಂಬಿತ್ತು. ಆದರೆ ಅದ್ಯಾಕೋ? ಕಬ್ಬಿಣ ಕಾದಿರುವಾಗಲೇ ಬಡಿಯುವ ಮನಸ್ಸನ್ನು ದುನಿಯಾ ವಿಜಯ್ ಮಾಡಲಿಲ್ಲ. ನಿರ್ಮಾಪಕ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಕೂಡ ಶೀಘ್ರ ಬಿಡುಗಡೆಗೆ ಮುಂದಾಗಿಲ್ಲ.
ನಂಬೋದು ಬಿಡೋದು ನಿಮಗೆ ಬಿಟ್ಟಿದ್ದಾದರೂ, 'ಭೀಮ' ಶುರುವಾಗಿಯೇ ಏಪ್ರಿಲ್ 18ಕ್ಕೆ ಎರಡು ವರ್ಷಗಳಾಗಿವೆ. ಈ ಎರಡು ವರ್ಷಗಳಲ್ಲಿ ಆತುರ ಆತುರವಾಗಿ ಅಲ್ಲದೇ ಇದ್ದರೂ ನಿಧಾನವಾಗಿಯೇ ಭೀಮ ಚಿತ್ರವನ್ನು ಬಿಡುಗಡೆ ಮಾಡಬಹುದಿತ್ತು. 2023ರಲ್ಲಿಯೇ ತೆರೆಕಾಣಬಹುದು ಎನ್ನುವ ನಂಬಿಕೆ ಕೂಡ ಪ್ರೇಕ್ಷಕರಲ್ಲಿತ್ತು. ಆದ್ರೆ ಪದೇ ಪದೆ ಬಿಡುಗಡೆ ದಿನಾಂಕ ಮುಂದೆ ಹೋಗ್ತಾನೆ ಬಂತು.
ಇನ್ನೂ, ರಿಯಲ್ ಸ್ಟಾರ್ ಉಪೇಂದ್ರ ಅವರ 'ಯುಐ' ಕಥೆ ಕೂಡ 'ಭೀಮ' ಚಿತ್ರಕ್ಕಿಂತ ಭಿನ್ನವೇನಿಲ್ಲ. 2022ರ ಏಪ್ರಿಲ್ 18ರಂದು ಭೀಮ ಸೆಟ್ಟೇರಿದ್ದರೆ, 'ಯುಐ' ಮುಹೂರ್ತ ಭಾಗ್ಯ ಕಂಡಿದ್ದು 2022ರ ಜೂನ್ ಮೊದಲ ವಾರದಲ್ಲಿ. ಯುಐ ಕೇವಲ ಕನ್ನಡ ಸಿನಿಮಾವಲ್ಲ, ಪ್ಯಾನ್ ಇಂಡಿಯಾ ಚಿತ್ರ. ಗ್ರಾಫಿಕ್ಸ್ ಕೆಲಸವನ್ನು ಹೆಚ್ಚು ಬಯಸಿರುವ ಸಿನಿಮಾ. ಹೀಗಾಗಿ ಸಿನಿಮಾ ತಡವಾಗಿರೋ ಸಾಧ್ಯತೆಗಳಿವೆ. ಆದರೆ ಪ್ರತಿಯೊಬ್ಬರೂ ದ್ವೈವಾರ್ಷಿಕ ಯೋಜನೆ ಹಾಕಿಕೊಂಡರೆ, ಕನ್ನಡ ಚಿತ್ರರಂಗದ ಸದ್ದು ಕಡಿಮೆ ಆಗೋ ಸಾಧ್ಯತೆಗಳೂ ಇವೆ.