ಸೆಲೆಬ್ರಿಟಿ ಮಕ್ಕಳು ಹಾಗೂ ಮೊಮ್ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸತೇನಲ್ಲ. ಇದೀಗ ಡಾ. ರಾಜ್‌ಕುಮಾರ್ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ 'ಮಿಂಚುಹುಳ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಈ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೂ ಸಜ್ಜಾಗಿದೆ.
ಮಹೇಶ್ ಕುಮಾರ್ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ನಾದಬ್ರಹ್ಮ ಹಂಸಲೇಖ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ.ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಲ್ಲದೆ ಹಿರಿಯ ನಿರ್ಮಾಪಕ ಎಸ್. ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್, ರಾಜ್ ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಚಿತ್ರವನ್ನು ವೀಕ್ಷಿಸಿದರು.
''ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದೆ. ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ಆ ತಂದೆಯ ಬದುಕಿನ ವೈರುದ್ಯ, ಅಪ್ಪ-ಮಕ್ಕಳು ಬಾಡಿಗೆ ಕಟ್ಟಲಾಗದೇ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ, ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. 'ಮಿಂಚುಹುಳು'ವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ. ಅದು ಏನು ಎಂಬುದೇ 'ಮಿಂಚುಹುಳು' ಚಿತ್ರದ ಕಥಾಹಂದರ. ಈ ಚಿತ್ರ ಆಗಲು ಪುನೀತ್ ರಾಜ್‌ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಕಂಟೆಂಟ್ ಓರಿಯೆಂಟ್ ಚಿತ್ರಗಳ ಅಗತ್ಯತೆ ತುಂಬಾ ಇದೆವೆಂದು ಅವರು ಆಗಾಗ ಹೇಳುತ್ತಿದ್ದರು. ಅಂತಹದ್ದೇ ಮತ್ತೊಂದು ಚಿತ್ರವಿದು. ಒಳ್ಳೇ ಸಿನಿಮಾನ ಬೆಂಬಲಿಸಿ'' ಎಂದು ಚಿತ್ರ ಪ್ರದರ್ಶನದ ನಂತರ ನಿರ್ದೇಶಕ ಮಹೇಶ್ ಕುಮಾರ್ ಸಿನಿ ಪ್ರೇಮಿಗಳಲ್ಲಿ ಮನವಿ ಮಾಡಿದರು.
ಬಾಲನಟ ಪ್ರೀತಂ ಕೊಪ್ಪದ ಮಾತನಾಡಿ, ನಮ್ಮ ಚಿತ್ರ ಅ. 4ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ ಸಹಕರಿಸಿ ಎಂದು ತಮ್ಮ ಪಾತ್ರ ಪರಿಚಯಿಸಿಕೊಂಡರು.
ನಟ ಪೃಥ್ವಿರಾಜ್ ಮಾತನಾಡಿ, ಚಿತ್ರದಲ್ಲಿ ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಬೆಂಬಲ ಬೇಕು ಎಂದು ಕೇಳಿಕೊಂಡರು.