ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ನಲ್ಲಿ ಒಂದಿಷ್ಟು ವಾರಗಳ ನಂತರ ಅತಿಥಿಗಳು ಆಗಮಿಸೋದು ಸಹಜ. ಆದರೆ ಸೀಸನ್ 11ರಲ್ಲಿ ಈಗಾಗಲೇ ಹಲವು ಬದಲಾವಣೆ, ಮಹತ್ತರ ಘಟನೆಗಳು ನಡೆದು ಹೋಗಿವೆ. ಈಗಾಗಲೇ ಜನಪ್ರಿಯ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕರಾದ ಯೋಗರಾಜ್ ಭಟ್ ಆಗಮಿಸಿದ್ದಾರೆ.
ಈ ವಾರ ಅಭಿನಯ ಚಕ್ರವರ್ತಿ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಗಳನ್ನು ನಡೆಸಿಕೊಡುವುದಿಲ್ಲ ಎನ್ನಲಾಗಿದೆ. ಹೀಗಾಗಿ, ಈ ವಾರ ಇಬ್ಬರು ಅತಿಥಿಗಳು ಮನೆ ಪ್ರವೇಶಿಸಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಆಗಮಿಸಿ ರಾಜಕೀಯ ಟಾಸ್ಕ್ ಒಂದನ್ನು ನಡೆಸಿಕೊಟ್ಟರು. ನ್ಯೂಸ್ ನಡೆಸಿಕೊಡುವಂತೆಯೇ ಇಲ್ಲಿಯೂ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಿತು. ಸಂಚಿಕೆಗೆ ವೀಕ್ಷಕರು ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಮನೆಗೆ ಭಟ್ಟರ ಎಂಟ್ರಿಯಾಗಿದೆ.
ಇಂದು ಮನೆಗೆ ಆಗಮಿಸಿರುವ ಯೋಗರಾಜ್ ಭಟ್ ಅವರು ಸಂಪೂರ್ಣ ದಿನ ಮನೆಯಲ್ಲಿಯೇ ಇರುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಅನಾವರಣಗೊಂಡಿರುವ ಪ್ರೋಮೋ ನೋಡಿದ್ರೆ ವಾರದ ಪಂಚಾಯ್ತಿಯನ್ನು ತಮ್ಮದೇ ಶೈಲಿಯಲ್ಲಿ ನಡೆಸಿಕೊಡುವಂತೆ ತೋರುತ್ತಿದೆ. ''ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!'' ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.