2023ರ ಬ್ಲಾಕ್ಬಸ್ಟರ್ ಸಿನಿಮಾ 'ಪಠಾಣ್'ನ ಸೀಕ್ವೆಲ್ಗಾಗಿ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಕಾತರರಾಗಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ಪಠಾಣ್ ಸೀಕ್ವೆಲ್‌ನೊಂದಿಗೆ ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್)ನ ಸ್ಪೈ ಯೂನಿವರ್ಸ್ ಅನ್ನು ವಿಸ್ತರಿಸಲು ಸಿದ್ಧರಾಗಿದ್ದು, ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಜೊತೆ ತಮ್ಮ ಪಾತ್ರಕ್ಕೆ ಮರಳಲು ಸಜ್ಜಾಗಿದ್ದಾರೆ. ಅದಾಗ್ಯೂ, ಸೀಕ್ವೆಲ್ ತಂಡದಲ್ಲೊಂದು ಬದಲಾವಣೆ ಆಗಲಿದೆ. ಮೊದಲ ಭಾಗಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸಿದ್ಧಾರ್ಥ್ ಆನಂದ್ ಪಠಾಣ್ 2 ಅನ್ನು ನಿರ್ದೇಶಿಸುವುದಿಲ್ಲವಂತೆ.
'ಪಠಾಣ್' ನಿರೂಪಣೆಯಲ್ಲಿ ಬದಲಾವಣೆ, ಹೊಸ ದೃಷ್ಟಿಕೋನ ತರುವ ಉದ್ದೇಶದಿಂದ ನಿರ್ಮಾಪಕ ಆದಿತ್ಯ ಚೋಪ್ರಾ ನಿರ್ದೇಶನದ ಉಸ್ತುವಾರಿಯನ್ನು ಮತ್ತೋರ್ವ ನಿರ್ದೇಶಕನಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಬಹಿರಂಗಪಡಿಸಿದೆ. ಪಠಾಣ್ 2ರ ನಿರ್ದೇಶಕರು ಇನ್ನೂ ದೃಢಪಟ್ಟಿಲ್ಲವಾದರೂ, ವರ್ಷಾಂತ್ಯದೊಳಗೆ ಸಿನಿಮಾ ಪ್ರಾರಂಭಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಸಿದ್ಧಾರ್ಥ್ ಆನಂದ್ 'ಪಠಾಣ್ 2'ನಿಂದ ಹಿಂದೆ ಸರಿದಿದ್ದರೂ, ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ನೊಂದಿಗಿನ ಅವರ ಕೊಲಾಬರೇಶನ್ ಮುಂದುವರಿಯುತ್ತದೆ. ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಪ್ರೊಜೆಕ್ಟ್ ''ಟೈಗರ್ ವರ್ಸಸ್ ಪಠಾಣ್'' ಅನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಪಠಾಣ್ 2ಕ್ಕೂ ಈ ಚಿತ್ರಕ್ಕೂ ಒಂದು ಸಣ್ಣ ಲಿಂಕ್ ಇರಲಿದೆ ಎಂದು ಹೇಳಲಾಗಿದೆ.