ಬಾಲಿವುಡ್ ಹಿಟ್ ಸಿನಿಮಾ 'ಪಿಕು' 9 ವರ್ಷಗಳನ್ನು ಪೂರೈಸಿದೆ. 2015ರ ಮೇ 8ರಂದು ತೆರೆಗಪ್ಪಳಿಸಿದ್ದ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಸೆಟ್ನ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಶೂಜಿತ್ ಸಿರ್ಕಾರ್ ನಿರ್ದೇಶನದ ಕಾಮಿಡಿ ಡ್ರಾಮಾದಲ್ಲಿನ ತಮ್ಮ ಸಹ-ನಟರೊಂದಿಗಿನ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ.
ದೀಪಿಕಾ ಪಡುಕೋಣೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪಿಕು ಸೆಟ್ನ ಕ್ಯಾಂಡಿಡ್ ಫೋಟೋವನ್ನು ಶೇರ್ ಮಾಡಿದ್ದಾರೆ. "ನಾನು ಎಷ್ಟು ತಿನ್ನುತ್ತೇನೆ ಎಂಬುದನ್ನು ಎಲ್ಲರಿಗೂ ಹೇಳಲು ಅಮಿತಾಭ್ ಬಚ್ಚನ್ ಇಷ್ಟಪಡುತ್ತಾರೆ. ಇರ್ಫಾನ್, ನಾವು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ'' ಎಂದು ಬರೆದುಕೊಂಡಿದ್ದಾರೆ. ತೆರೆಮರೆಯ ಫೋಟೋದಲ್ಲಿ, ಚಿತ್ರದ ಮೂವರು ಮುಖ್ಯಪಾತ್ರಧಾರಿಗಳಾದ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿವಂಗತ ನಟ ಇರ್ಫಾನ್ ಖಾನ್ ಮಾತುಕತೆಯಲ್ಲಿ ಮುಳುಗಿರುವುದನ್ನು ಕಾಣಬಹುದು.
ಈ ಫೋಟೋ ಸಹನಟರ ಬಾಂಧವ್ಯವನ್ನು ಪ್ರತಿಬಿಂಬಿಸಿದೆ. ಜೊತೆಗೆ, ಸೆಟ್‌ನಲ್ಲಿ ಅವರ ಮೋಜಿನ ಕ್ಷಣಗಳನ್ನು ಹೈಲೈಟ್ ಮಾಡಿದೆ. ಚಿತ್ರದಲ್ಲಿ ದೀಪಿಕಾ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮಿತಾಭ್, ಕ್ಯಾಪ್, ಬೂದು ಬಣ್ಣದ ಕುರ್ತಾ, ಬಿಳಿ ಪೈಜಾಮಾದೊಂದಿಗೆ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಮತ್ತು ದೀಪಿಕಾ ಹಿರಿಯ ನಟನ ಅಕ್ಕಪಕ್ಕ ಕುಳಿತು ತಾಳ್ಮೆಯಿಂದ ಅವರ ಮಾತುಗಳನ್ನು ಕೇಳುತ್ತಿರುವಂತೆ, ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವಂತೆ ತೋರಿದೆ.
ಫೋಟೋ ಶೇರ್ ಆಗುತ್ತಿದ್ದಂತೆ, ಖ್ಯಾತ ಕಲಾವಿದರ ಅಭಿಮಾನಿಗಳಿಂದ ಪ್ರೀತಿಯಧಾರೆಯಾಗಿದೆ. ಕಾಮೆಂಟ್ ಸೆಕ್ಷನ್ನಲ್ಲಿ ತಮ್ಮ ರಿಯಾಕ್ಷನ್ ಕೊಡಲು ಶುರುಮಾಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, "ನನ್ನ ಮೆಚ್ಚಿನ ಪಾತ್ರ ಮತ್ತು ನೆಚ್ಚಿನ ಚಿತ್ರ, ಯಾವಾಗಲೂ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, "ಪಿಕು ಮತ್ತು ರಾಣಾ ನಾನು ಹುಡುಕುತ್ತಿರುವ ಪಾತ್ರ, ಪ್ಯೂರ್ ಜಾಯ್" ಎಂದು ತಿಳಿಸಿದ್ದಾರೆ. ಇನ್ನೂ ಹಲವರು ಈ ಚಿತ್ರವನ್ನು 'ಕಂಫರ್ಟ್ ಮೂವಿ' ಎಂಬರ್ಥದಲ್ಲಿ ಉಲ್ಲೇಖಿಸಿ, ಮರು ವೀಕ್ಷಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.