ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕೆರಿಯರ್ನ ಹಿಟ್ ಸಿನಿಮಾಗಳಲ್ಲೊಂದಾದ 'ನವಗ್ರಹ' ಇಂದು ಬಹಳ ಅದ್ಧೂರಿಯಾಗಿ ತೆರೆಕಂಡಿದೆ. 16 ವರ್ಷಗಳ ಬಳಿಕ ಸಿನಿಮಾ ಬಿಗ್ ಸ್ಕ್ರೀನ್ಗೆ ಮರಳಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ದರ್ಶನ್ ಜೊತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲುಪಾಲಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಸದ್ಯ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದಿದ್ದಾರೆ. ಈ ಹೊತ್ತಲ್ಲೇ ನಟನ ಹಿಟ್ ಸಿನಿಮಾ ಮರು ಬಿಡುಗಡೆ ಆಗಿರೋದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಮಧ್ಯಂತರ ಜಾಮೀನಿಗೂ ಮುನ್ನವೇ, ಸಿನಿಮಾದ ರೀ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು.
ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಜೈಲುವಾಸದ ಸಂದರ್ಭ, ಕೆಲ ವಾರಗಳ ಹಿಂದಷ್ಟೇ 'ಕರಿಯ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು. ಇಂದು ನವಗ್ರಹ ರೀ ರಿಲೀಸ್ ಆಗಿದೆ. ಇದಕ್ಕೂ ಮುನ್ನ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಕೆಲವರು ಸಿನಿಮಾ ಪ್ರಮೋಶನ್ ಕೈಗೊಂಡಿದ್ದರು.
ನಟ ನಾಗೇಂದ್ರ ಅರಸ್ ಮಾತನಾಡಿ, 16 ವರ್ಷಗಳ ಬಳಿಕ ಸಿನಿಮಾ ಬಿಡುಗಡೆ ಆಗಿರೋದು ಖುಷಿಯ ವಿಚಾರ. ನಿಜವಾಗಿಯೂ ನಾವು 16 ವರ್ಷದವರಂತೆ ಆಗಿಬಿಟ್ಟಿದ್ದೇವೆ. ಆ ಉತ್ಸಾಹ ಬಂದಿದೆ. ಆ ಒಂದು ಕ್ರೇಜ್ ಏನಿತ್ತು 16 ವರ್ಷಗಳ ಬಳಿಕವೂ ಅದೇ ಕ್ರೇಜ್ ಇದೆ. ಜನಸಮೂಹ ನೋಡುತ್ತಿದ್ರೆ ಬಹಳ ಎಮೋಷನಲ್ ಫೀಲ್ ಆಗ್ತಿದೆ. ಈ ಸಂದರ್ಭ ನಮ್ಮ ಸಂಪೂರ್ಣ ಚಿತ್ರತಂಡ ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು. ಸ್ಕ್ರೀನ್ನಲ್ಲಿ ಎಲ್ಲರನ್ನೂ ನೋಡ್ತೀರ. ಎಲ್ಲವೂ ಆದಷ್ಟು ಬೇಗ ಒಳ್ಳೆಯದಾಗುತ್ತದೆ. ಸದ್ಯಕ್ಕಂತೂ ಬಹಳ ಉತ್ಸುಕನಾಗಿದ್ದೇನೆ. ನಿರ್ದೇಶಕ ದಿನಕರ್ ಮತ್ತು ನಾನು ಮಾತನಾಡಿದ್ದೆವು. ಸ್ವಲ್ಪ ಟೆನ್ಷನ್ ಇತ್ತು. ಆದ್ರೆ ಏನೇ ಆಗ್ಲಿ, ಅಭಿಮಾನಿಗಳೆಲ್ಲರೂ ಅವರವರ ಸ್ಟಾರ್ಸ್ ಅನ್ನು ಆರಾಧಿಸಿ. ಎಲ್ಲರನ್ನೂ ಪ್ರೀತಿಸಿ. ನಿಮಗೋಸ್ಕರನೇ ಎಲ್ಲರೂ ಸಿನಿಮಾ ಮಾಡೋದು. ಸಿನಿಮಾನಾ ಸಿನಿಮಾ ತರವೇ ಪ್ರೀತಿಸಿ ಎಂದು ತಿಳಿಸಿದರು.