ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಅವರ ಸಹಚರರ ಸೆರೆವಾಸ ಮುಂದುವರೆದಿದೆ. ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9ರ ವರೆಗೆ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯ ಹಿನ್ನೆಲೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದ ಸಂಬಂಧ ಆರೋಪಿ ದರ್ಶನ್ ಸೇರಿ 10 ಮಂದಿಯನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ. ಈ ಹಿನ್ನೆಲೆ ಇಂದು ಸಂಜೆ ವೇಳೆಗೆ ಶಿಫ್ಟ್ ಮಾಡಲು ಜೈಲಿನ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಪವನ್, ರಾಘವೇಂದ್ರ, ಜಗದೀಶ್, ನಂದೀಶ್, ಪ್ರದೂಶ್, ವಿನಯ್, ಲಕ್ಷ್ಮಣ್, ನಾಗರಾಜ್ ಹಾಗೂ ಧನರಾಜ್ ಎಂಬ 10 ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ನಿನ್ನೆ ನ್ಯಾಯಾಲಯ ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶ ಪ್ರತಿ ಸ್ವೀಕರಿಸಿರುವ ಜೈಲಾಧಿಕಾರಿಗಳು ಜೈಲಿನ ನಿಯಾಮವಳಿ ಪ್ರಕ್ರಿಯೆ ಮುಗಿಸಿ ಇಂದು ಸಂಜೆಯೊಳಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.
ದರ್ಶನ್ ಸಹಚರರ ಸ್ಥಳಾಂತರ ಹಿನ್ನೆಲೆ, ಮಾರ್ಗಮಧ್ಯೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಹಾಗಾಗಿ ರಾಜ್ಯ ಪೊಲೀಸ್ ಇಲಾಖೆಯ ಲಾ ಆ್ಯಂಡ್ ಆರ್ಡರ್ ಎಡಿಜಿಪಿ ಆರ್ ಹಿತೇಂದ್ರ ಅವರು ಸಂಬಂಧಿಸಿದ ಜಿಲ್ಲಾ ಎಸ್ಪಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶಿಸಿದ್ದಾರೆ.