ಕನ್ನಡ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ. ಯಾರ ಬಳಿಯೂ ಹಂಚಿಕೊಳ್ಳದ ವಿಷಯಗಳಿದ್ದರೆ, ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬಹುದು ಎಂದು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ತಿಳಿಸುತ್ತಾರೆ. ಅದರಂತೆ, ಕೆಲ ಸ್ಪರ್ಧಿಗಳು ಕನ್ಫೆಷನ್ ರೂಮ್ನಲ್ಲಿ ತಮ್ಮ ಕಣ್ಣೀರಿನ ಕಥೆಗಳನ್ನು ತಿಳಿಸಿದ್ದಾರೆ. ಅವರ ಕಷ್ಟದ ದಿನಗಳನ್ನು ಕೇಳಿದ ವೀಕ್ಷಕರು ಕೂಡಾ ಮರುಗಿದ್ದಾರೆ.
ಐಶ್ವರ್ಯಾ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ, ತ್ರಿವಿಕ್ರಮ್ ತಮ್ಮ ನೋವನ್ನು ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾರೆ.
ಮೋಕ್ಷಿತಾ ಮಾತನಾಡಿ, ಕಳೆದ ಒಂದು ವರ್ಷದಿಂದ ಮನೆಯಲ್ಲಿ ನನ್ನ ಮದುವೆಗೆ ಹೆಚ್ಚಿನ ಒತ್ತಾಯ ಬಂದಿದೆ. ಆದ್ರೆ ಅದನ್ನು ಮುಂದೂಡುತ್ತಾ ಬಂದಿದ್ದೇನೆ. ನನಗಿರುವ ಜವಾಬ್ದಾರಿಗಳು ಅದಕ್ಕೆ ಪ್ರಮುಖ ಕಾರಣಗಳು. ನನ್ನ ತಮ್ಮ ಫಿಸಿಕಲಿ ಚಾಲೆಂಜ್ಡ್. ಮನೆಗೆ ನಾನೇ ಮಗಳು ಮತ್ತು ಮಗ. ಒಂದು ವೇಳೆ ಮದುವೆಯಾದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ನನಗಿದೆ. ಜೊತೆಗೆ, ಮದುವೆಯಾಗುವ ಹುಡುಗ ಎಲ್ಲಿ ನನ್ನನ್ನು ಅಪ್ಪ-ಅಮ್ಮನಿಂದ ದೂರ ಮಾಡುತ್ತಾನೆ ಎಂಬ ಭಯವೂ ಇದೆ. ಹಾಗಾಗಿ ಮದುವೆ ಮುಂದಕ್ಕೆ ಹಾಕಿ ನಿಮಗೆ ನೋವು ಕೊಟ್ಟಿದ್ದೇನೆ. ನಾನು ಈವರೆಗೆ ನಿಮ್ಮೊಂದಿಗೆ ಮಿಸ್ ಯೂ ಎಂದು ಹೇಳಿಕೊಂಡಿರಲಿಲ್ಲ. ಆದ್ರೀಗ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಿಗ್ ಬಾಸ್ಗೆ ಬರಬೇಕೆನ್ನೋದು ನಿಮ್ಮ ಕನಸು. ನಿಮಗೆ ನಿರಾಸೆ ಮಾಡಲ್ಲ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಉಗ್ರಂ ಮಂಜು ಕೂಡಾ ಮಾತನಾಡಿ ಬಹಳ ಭಾವುಕರಾದರು. ಬಿಗ್ ಬಾಸ್ ಬಳಿ ನೋವು ತೋಡಿಕೊಂಡ ಉಗ್ರಂ ಮಂಜು, ನಾನು ಕೆಲ ದುಶ್ಚಟಗಳಿಗೆ ಒಳಗಾಗಿದ್ದೆ. ಮತ್ತೆ ಆ ತಪ್ಪು ಮಾಡೋದಿಲ್ಲ. ನನ್ನ ಅಪ್ಪ, ಅಮ್ಮ, ತಂಗಿಯರಿಗಾಗಿ ಬದಲಾಗುತ್ತೇನೆ ಎಂದು ಭಾವುಕರಾಗಿ ಬಿಗ್ ಬಾಸ್ಗೆ ಮಾತು ಕೊಟ್ಟರು.