ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳ ಜೊತೆಗೆ ವಿಭಿನ್ನ ಟ್ಯಾಲೆಂಟ್ ಇರುವ ಪ್ರತಿಭೆಗಳ ಆಗಮನ ಮುಂದುವರಿದಿದೆ. ಇದೀಗ ಹೊಸಬರೇ ಸೇರಿಕೊಂಡು ಮಾಡುತ್ತಿರುವ 'ಸರ್ವೇ ನಂಬರ್ 45' ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಶ್ರೀ ಬಂಡಿ ಮಹಾಂಕಾಳಮ್ಮನ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ದೇಶಕ ಹೆಚ್.ವಾಸು ಕ್ಲಾಪ್ ಮಾಡಿದ್ರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕ್ಯಾಮರಾ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಶರವಣ ಉಪಸ್ಥಿತರಿದ್ದರು.
ಹಿರಿಯ ನಿರ್ದೇಶಕರಾದ ಹೆಚ್.ವಾಸು ಮತ್ತು ಕೆ.ರಾಘವ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿರುವ ಪಿರಿಯಾಪಟ್ಟಣದ ಶಿವಕುಮಾರ್ ಎಂ ಶೆಟ್ಟಿಹಳ್ಳಿ ಅವರು ಈ 'ಸರ್ವೇ ನಂಬರ್ 45' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಮಹದೇಶ್ವರ ಭಕ್ತಿ ಗೀತೆಗಳಿಗೆ ಸಾಹಿತ್ಯ ಬರೆದಿದ್ದ ಶಿವಕುಮಾರ್ ಈ ಸಿನಿಮಾಗೆ ರಚನೆ, ಚಿತ್ರಕಥೆ ಜೊತೆಗೆ ಮೂರು ಹಾಡುಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಜಾಗಕ್ಕೆ 'ಸರ್ವೇ ನಂಬರ್' ಎಂದು ಸರ್ಕಾರ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆಯತನದಲ್ಲಿ ಹೇಗೆ ಬಗೆಹರಿಸಿಕೊಳ್ಳುತ್ತಾನೆ ಮತ್ತು ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ ಎಂಬ ವಿಚಾರಗಳನ್ನು ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳ ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ತೂಕದ ಸಂದೇಶವನ್ನು ಹೇಳಲಾಗುತ್ತಿದೆ.